ಗಬ್ಬೆದ್ದು ನಾರುತ್ತಿದೆ ರಾಗಂ ಜಂಕ್ಷನ್

ವಾಟರ್ ಆಥೋರಿಟಿ ಗೇಟ್ ವಾಲ್ವ್ ಗುಂಡಿಯೊಳಗೆ ತ್ಯಾಜ್ಯ ಹಾಕಿರುವುದು

ಸಾಂಕ್ರಾಮಿಕ ರೋಗ ಭೀತಿಯಲ್ಲಿ ಸ್ಥಳೀಯರು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮಂಜೇಶ್ವರ ಗ್ರಾ ಪಂ ವ್ಯಾಪ್ತಿಯಲ್ಲಿರುವ ರೈಲ್ವೇ ನಿಲ್ದಾಣ ಹಾಗೂ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ರಾಗಂ ಜಂಕ್ಷನ್ ಪರಿಸರ ತ್ಯಾಜ್ಯಗಳಿಂದ ಗಬ್ಬೆದು ನಾರುತ್ತಿದೆ. ಜತೆಯಾಗಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲೇ ಸ್ಥಾಪಿಸಲಾಗಿದ್ದ ಕೇರಳ ನೀರು ಸರಬರಾಜು ಇಲಾಖೆಯ ಪೈಪ್ ಸಂಪರ್ಕದ ಗೇಟ್ ವಾಲ್ವಿಗೆ ತ್ಯಾಜ್ಯಗಳನ್ನು ಹಾಕಿ ಸಂಪೂರ್ಣವಾಗಿ ಅದನ್ನು ಮುಚ್ಚಲಾಗಿದೆ.

ತೂಮಿನಾಡು ಕುಂಜತ್ತೂರು ಭಾಗದಲ್ಲಿರುವ ಕಾಲೊನಿಗಳಲ್ಲಿ ನೀರಿಗಾಗಿ ಪರದಾಡುತ್ತಿರುವ ಜನತೆಗೆ ಗುವ್ವೆದಪಡ್ಪು ಹಾಗೂ ಚೌಕಿ ಪರಿಸರದ ಟ್ಯಾಂಕಿನಿಂದ ಶೇಖರಿಸಲಾದ ನೀರನ್ನು ಈ ಗೇಟ್ ವಾಲ್ವ್ ಮೂಲಕವೇ ಬಿಡಲು ಯತ್ನ ಮುಂದುವರಿದಿದ್ದು, ಕಳೆದೆರಡು ದಿನದಿಂದ ಇಲ್ಲಿ ವಾಟರ್ ಆಥೋರಿಟಿ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರು ವಾಲ್ವ್ ಹುಡುಕಲು ಹರಸಾಹಸಪಡುತ್ತಿದ್ದರೂ ತ್ಯಾಜ್ಯಗಳ ದುರ್ವಾಸನೆಯಿಂದ ವಾಲ್ವ್ ಪತ್ತೆಹಚ್ಚಲೂ ಅಸಾಧ್ಯವಾದ ಪರಿಸ್ಥಿತಿ ಬಂದೊದಗಿದೆ.

ವ್ಯಾಪಾರಿಗಳು, ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡುವವರು ಅದೇ ರೀತಿ ರಾಷ್ಟ್ರೀಯ ಹೆದ್ದಾರಿ ಸಂಚಾರಿಗಳು ಇದೇ ಸ್ಥಳದಲ್ಲಿ ತ್ಯಾಜ್ಯಗಳನ್ನು ತಂದು ಹಾಕುತ್ತಿರುವುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ.

ಮೀನು ಮಾರಲು ಗ್ರಾ ಪಂ ವತಿಯಿಂದ ಸುಸಜ್ಜಿತವಾದ ಮೀನು ಮಾರುಕಟ್ಟೆ ನಿರ್ಮಿಸಿಕೊಡಲಾಗಿದ್ದರೂ ಕೆಲ ಮೀನು ಮಾರಾಟಗಾರರು ಅಧಿಕಾರಿಗಳಿಗೆ ಸವಾಲೊಡ್ಡಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಮೀನು ಮಾರಾಟ ಮಾಡಿ ಅದರ ತ್ಯಾಜ್ಯಗಳನ್ನು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಬಿಸಾಡುತ್ತಿರುವುದಾಗಿ ವ್ಯಾಪಕ ದೂರುಗಳು ಕೇಳಿಬಂದಿದೆ. ರೈಲ್ವೇ ನಿಲ್ದಾಣಕ್ಕೂ ಇದೇ ರಸ್ತೆಯಿಂದಲೇ ಹಾದು ಹೋಗಬೇಕಾಗಿದೆ. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಲು ಬಸ್ಸಿಗಾಗಿ ಇದರ ಪಕ್ಕದಲೇ ಕಾಯಬೇಕಾದ ದುಃಸ್ಥಿತಿ ಇದೆ. ಇದೀಗ ಈ ಪರಿಸರವೇ ಸಾಂಕ್ರಾಮಿಕ ರೋಗದ ಭೀತಿಯಲ್ಲಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.