`ನನ್ನ ವಿರುದ್ಧ ಎಫೈಆರ್ ದಾಖಲಿಸಬಹುದೆಂದು ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ’

  • ನೀವು ಪ್ರಕಟಿಸಿದ ವರದಿಯ ಮಹತ್ವವನ್ನು ಹೇಳಿ.

ನಿಮ್ಮ ಫೋನ್ ಸಂಖ್ಯೆ, ನಿಮ್ಮ ಜನನ ದಿನಾಂಕ, ನಿಮ್ಮ ಹೆತ್ತವರ ಹೆಸರು, ನಿಮ್ಮ ವಿಳಾಸ, ನಿಮ್ಮ ಫೋಟೋ ಯಾವುದೂ ಸುರಕ್ಷಿತವಲ್ಲ. ಎಲ್ಲಾ ಮಾಹಿತಿಯನ್ನೂ ಯಾರು ಕೂಡಾ ಕದಿಯಬಹುದು.

 

ನಿಮ್ಮ ಆಧಾರ್ ಮಾಹಿತಿ ಸರಕಾರದ ಬಳಿ ಸುರಕ್ಷಿತವಿದೆಯೆಂದು ನೀವಂದುಕೊಂಡಿದ್ದೀರಾ ? ಹಾಗಾದರೆ ಚಂಡೀಗಡದ `ದಿ ಟ್ರಿಬ್ಯೂನ್’ ಪತ್ರಿಕೆಯ ವರದಿಗಾರ್ತಿ ರಚನಾ ಖೈರಾ ಅವರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಆಧಾರ್ ಮಾಹಿತಿ ಹೇಗೆ ಸುಲಭವಾಗಿ ಸೋರಿಕೆಯಾಗುತ್ತಿದೆಯೆಂಬ ಬಗ್ಗೆ ಆಕೆಯ ಸ್ಫೋಟಕ ವರದಿಯೊಂದರ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಎಫೈಆರ್ ದಾಖಲಿಸಿದ್ದು, ಅದರಲ್ಲಿ ಆಕೆಯ ಹೆಸರೂ ಇದೆ. ಆಧಾರ್ ಮಾಹಿತಿ ಸುರಕ್ಷಾ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಆಕೆಯ ವರದಿ ಎತ್ತಿ ಹಿಡಿದಿತ್ತು. ರಚನಾ ಜತೆಗಿನ ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ.

  • ಈ ವಿಷಯ ನಿಮಗೆ ಹೇಗೆ ತಿಳಿಯಿತು ?

ತನಗೆ ಎಲ್ಲಾ ಆಧಾರ್ ಡಾಟಾ ತಿಳಿಯುವುದು ಸಾಧ್ಯವಾಗಿದೆ ಎಂದು ಹೇಳುವ ಮೂಲವೊಂದರ ಬಗ್ಗೆ ನನಗೆ ತಿಳಿದುಬಂತು. ಆದರೆ ತನ್ನ ಕೈಯ್ಯಲ್ಲಿ ಏನೋ ಕಾನೂನುಬಾಹಿರವಾಗಿರುವುದು ಇದೆಯೆಂಬ ಭಯ ಆತನಿಗಿತ್ತು. ಆತ ಈ ಬಗ್ಗೆ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ ಮಾಹಿತಿ ನೀಡಿದರೂ ಆತನ ಮಾತುಗಳನ್ನು ಅಲ್ಲಿನ ಆಪರೇಟರುಗಳು ಗಂಭೀರವಾಗಿ ಪರಿಗಣಿಸದೆ ಆ ದೂರನ್ನು ಫಾರ್ವರ್ಡ್ ಮಾಡಿದ್ದರು. ನಂತರ ಆತ ನನ್ನ ಬಳಿ ಬಂದು ಈ ಬಗ್ಗೆ ಹೇಳಿದ. ಈ ಕಥೆ ಬಹಳಷ್ಟು ತಾಂತ್ರಿಕತೆಯಿಂದ ಕೂಡಿದ್ದರಿಂದ ಯಾರು ಕೂಡ ಆತನನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ನಾನಂದುಕೊಂಡೆ.

  • ನೀವು ಈ ಬಗ್ಗೆ ವರದಿ ಮಾಡಿದ ನಂತರ ಏನಾಗಬಹುದೆಂದು ನಿರೀಕ್ಷಿಸಿದ್ದಿರಿ ?

ಸರಕಾರ ಆಧಾರ್ ವ್ಯವಸ್ಥೆಯನ್ನು ಸರಿಪಡಿಸಬಹುದೆಂದು ನಾನಂದುಕೊಂಡಿದ್ದೆ. ಅವರು ಎಲ್ಲಾ ಮಾಹಿತಿ ಪಡೆದು ಆಧಾರ್ ಮಾಹಿತಿ ಸೋರಿಕೆ ಎಷ್ಟರ ಮಟ್ಟಿಗಾಗಿದೆ ಎಂದು ತಿಳಿಯುವ ಪ್ರಯತ್ನ ನಡೆಸಬಹುದೆಂದು ಅಂದುಕೊಂಡಿದ್ದೆ. ಆದರೆ ನನ್ನ ವಿರುದ್ಧವೇ ಎಫೈಆರ್ ದಾಖಲಿಸುತ್ತಾರೆಂದು ನಾನು ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ ನಮ್ಮ ವೈಯಕ್ತಿಕ ಮಾಹಿತಿಯನ್ನು ಸ್ವಲ್ಪ ಮಟ್ಟಿನ ಸುರಕ್ಷತೆಯೊಂದಿಗೆ ನೀಡಲಾಗಿತ್ತು. ಅವರ ಬಾಗಿಲುಗಳು ಹಾಗೂ ಕಿಟಿಕಿಗಳು ತೆರೆದಿದ್ದವು. ನಾನು ಕೊಠಡಿಯನ್ನು ಪ್ರವೇಶಿಸಿದ್ದರಿಂದ ಇದು ನನ್ನ ತಪ್ಪು ಎಂದು ಅವರು ಈಗ ಹೇಳುತ್ತಿದ್ದಾರೆ. ಬಾಗಿಲನ್ನು ಯಾರು ತೆರೆದಿದ್ದರು ಎಂದು ಅವರು ಪತ್ತೆ ಹಚ್ಚಬೇಕಿತ್ತು. ಇದು ಅವರ ತಪ್ಪು. ನಿಧಿಯಿರುವ ಕೊಠಡಿಯೊಂದನ್ನು ತೆರೆದಿಟ್ಟರೆ ಹಾಗೂ ನಾನು ಆ ಕೊಠಡಿಯನ್ನು ಪ್ರವೇಶಿಸಿ ಕದಿಯದೆ ಸಾರ್ವಜನಿಕರ ಸೊತ್ತನ್ನು ತೆರೆದೇ ಇಡಲಾಗಿದೆ ಎಂದು ಬೊಬ್ಬೆ ಹೊಡೆದರೆ ಅದು ನನ್ನ ತಪ್ಪಲ್ಲ. ನಾನೇನೂ ಕದ್ದಿಲ್ಲ ಆದರೆ ನಾನೇಕೆ ಕೊಠಡಿ ಪ್ರವೇಶಿಸಿದೆ ಎಂದು ಈಗ ಅವರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಖಜಾನೆಯ ಬಾಗಿಲಿನ ಬೀಗವನ್ನು ಯಾರು ತೆರೆದರೆಂದು ತನಿಖೆ ನಡೆಸುತ್ತಿಲ್ಲ.

  • ಈಗ ನೀವೇನು ಮಾಡುತ್ತೀರಿ ?

ವರದಿ ಪ್ರಕಟವಾದ ನಂತರ ವಿಶಿಷ್ಟ ಗುರುತು ಪ್ರಾಧಿಕಾರ ತನ್ನ ಡಾಟಾ ಬಹಿರಂಗಗೊಂಡಿದೆ ಎಂದು ತಿಳಿದಿರಬೇಕು. ಅವರು ನನ್ನ ವಿರುದ್ಧ ನಾನು ಕೆಲಸ ಮಾಡುವ `ದಿ ಟ್ರಿಬ್ಯೂನ್’ ಹಾಗೂ ವರದಿಯಲ್ಲಿ ಉಲ್ಲೇಖಿಸಲಾದ ಕೆಲವರ ವಿರುದ್ಧ ಎಫೈಆರ್ ದಾಖಲಿಸಿದ್ದಾರೆ. ಆಧಾರ್ ಮತ್ತು ಐ-ಟಿ ಕಾಯಿದೆಯನ್ವಯ ಅವರು ನನ್ನ ವಿರುದ್ಧ ಕ್ರಮ ಕೈಗೊಳ್ಳುತ್ತಾರೆಂದು ನನಗೆ ತಿಳಿದಿದೆ. ನನ್ನ ಪತ್ರಿಕೆ ಕಾನೂನು ವಿಚಾರಗಳನ್ನು ನೋಡಿಕೊಳ್ಳುತ್ತಿದೆ.

  • ಈ ವರದಿ ಹೊರತರಲು ನೀವೇನೋ ಅಕ್ರಮವಾಗಿದ್ದನ್ನು ಮಾಡಿದ್ದೀರಿ ಎಂದು ಕೆಲವರು ಆರೋಪಿಸುತ್ತಿದ್ಧಾರಲ್ಲ ?

ಇದು ಜನರು ಹೇಳುತ್ತಿಲ್ಲ, ಬದಲಾಗಿ ವಿಶಿಷ್ಟ ಗುರುತು ಪ್ರಾಧಿಕಾರದ ಅಧಿಕಾರಿಗಳು ಹೇಳುತ್ತಿದ್ದಾರೆ. ಅವರದ್ದು ತಾಂತ್ರಿಕೇತರ ಸಿಬ್ಬಂದಿಯಾಗಿರುವುದರಿಂದ ನನ್ನ ವರದಿಯ ತಾಂತ್ರಿಕ ವಿಷಯಗಳು ಅವರಿಗರ್ಥವಾಗಿಲ್ಲ. ನನ್ನ ವರದಿಯಲ್ಲಿ ಉಲ್ಲೇಖವಾದ ಮೂಲವೊಂದು ಕೇವಲ ರೂ 500 ಪಾವತಿಸಿ ಆಧಾರ್ ಡಾಟಾ ಖರೀದಿಸಿತ್ತು ಎಂದು ನನ್ನ ವರದಿ ಹೇಳಿದೆ. ಆದರೆ ನಾನು ಕಾನೂನು ಮುರಿದಿದ್ದೇನೆ ಎಂದು ಹೇಳಿ ನನ್ನ ವಿರುದ್ಧ ದೂರು ದಾಖಲಿಸಲಾಗಿದೆ.

  • ಆಧಾರ್ ಡಾಟಾ ಪಡೆಯಲು ನೀವು ಸುಳ್ಳು ಹೆಸರು ಬಳಸಿದ್ದೀರಾ ?

ಇಂತಹ ಒಂದು ವರದಿ ತಯಾರಿಸಲು ನೀವೇನು ಮಾಡುತ್ತೀರಿ ಹೇಳಿ. ನಾನು ನನಗೆ ತಿಳಿಯದೇ ಇದ್ದಂತಹ ವ್ಯಕ್ತಿಗಳಿಂದ ಮಾಹಿತಿ ಪಡೆದಿದ್ದೆ ಹಾಗೂ ಈ ಜನರು ಭಾರತದವರೇ ಅಥವಾ ಹೊರಗಿನವರೇ ಎಂಬುದು ನನಗೆ ತಿಳಿದಿಲ್ಲ. ನನ್ನ ಗುರುತನ್ನು ಬಹಿರಂಗಪಡಿಸಿದ್ದರೆ, ನಾನೊಬ್ಬಳು ಪತ್ರಕರ್ತೆ ಎಂದು ಹೇಳಿದ್ದರೆ ಈ ವರದಿ ತಯಾರಿಸಲು ಸಾಧ್ಯವಿತ್ತೇ ?

  • ನಿಮ್ಮ ವರದಿಗಾರ್ತಿ ಹುದ್ದೆಯನ್ನು ನೀವು ದುರಪಯೋಗಪಡಿಸಿದ್ದೀರಿ ಎಂದು ಅವರು ಹೇಳುತ್ತಿದ್ದಾರಲ್ಲ ?

ಇಲ್ಲ. ಅವರು ಹಾಗೆ ಹೇಳಿಲ್ಲ. ಕೆಲವು ನಿರ್ದಿಷ್ಟ ಅಧಿಕಾರಿಗಳಿಗೆ ಪಾಸ್ವರ್ಡ್ ಮತ್ತು ಲಾಗಿನ್ ಐಡಿ ನೀಡಲಾಗಿದೆ. ಪಂಜಾಬದಲ್ಲಿ ಇಬ್ಬರು ಅಧಿಕಾರಿಗಳಿಗೆ ಪಾಸ್ವರ್ಡ್ ನೀಡಲಾಗಿದೆ. ಈ ಅಧಿಕಾರಿಗಳೇ ಆಧಾರ್ ಡಾಟಾ ದುರುಪಯೋಗ ಪಡಿಸಿರಬಹುದು ನಾನಲ್ಲ ಎಂದು ಅವರೀಗ ಹೇಳುತ್ತಿದ್ದಾರೆ. ಆಧಾರ್ ಮಾಹಿತಿಯನ್ನು ದುರುಪಯೋಗಪಡಿಸಿದ ಆರೋಪ ನನ್ನ ಮೇಲಿಲ್ಲ.

  • ನೀವು ಪ್ರಕಟಿಸಿದ ವರದಿಯ ಮಹತ್ವವನ್ನು ಹೇಳಿ.

ನಿಮ್ಮ ಫೋನ್ ಸಂಖ್ಯೆ, ನಿಮ್ಮ ಜನನ ದಿನಾಂಕ, ನಿಮ್ಮ ಹೆತ್ತವರ ಹೆಸರು, ನಿಮ್ಮ ವಿಳಾಸ, ನಿಮ್ಮ ಫೋಟೋ ಯಾವುದೂ ಸುರಕ್ಷಿತವಲ್ಲ. ಎಲ್ಲಾ ಮಾಹಿತಿಯನ್ನೂ ಯಾರು ಕೂಡಾ ಕದಿಯಬಹುದು.

 

 

LEAVE A REPLY