ಗಬ್ಬೆದ್ದು ನಾರುತ್ತಿದೆ ರಾಗಂ ಪರಿಸರ

ಬಾಡಿಗೆ ವಸತಿಗೃಹಗಳ ಕೊಳಚೆ ನೀರು ಸಾರ್ವಜನಿಕ ಸ್ಥಳಕ್ಕೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮಂಜೇಶ್ವರ ರಾಗಂ ಜಂಕ್ಷನಿನ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಖಾಸಗಿ ಬಾಡಿಗೆ ವಸತಿಗೃಹಗಳ ಕಟ್ಟಡ ಮಾಲಕರ ಎಡವಟ್ಟಿನಿಂದಾಗಿ ಇದೀಗ ರಾಗಂ ಪರಿಸರದ ವ್ಯಾಪಾರಿಗಳು, ಆಟೋ ಚಾಲಕರು ಹಾಗೂ ಪ್ರಯಾಣಿಕರು ಕೊಳಚೆ ನೀರಿನ ದುರ್ವಾಸನೆಯಿಂದಾಗಿ ಸಾಂಕ್ರಾಮಿಕ ರೋಗದ ಭೀತಿ ಎದುರಿಸುವಂತಾಗಿದೆ.

ಈ ಬಗ್ಗೆ ಸ್ಪಂದಿಸಬೇಕಾದ ಆರೋಗ್ಯಧಿಕಾರಿಗಳು ಕಟ್ಟಡ ಮಾಲಕ ಆಮಿಷಕ್ಕೆ ಒಳಗಾಗಿ ಕರ್ತವ್ಯವನ್ನು ದುರುಪಯೋಗಪಡಿಸುತ್ತಿರುವುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ. ಹಲವು ಬಾರಿ ಆರೋಗ್ಯಾಧಿಕಾರಿಗಳು ಈ ಸ್ಥಳಕ್ಕೆ ಆಗಮಿಸಿ ವಸತಿ ಗೃಹಗಳಿಂದ ಸಾರ್ವಜನಿಕ ಸ್ಥಳಕ್ಕೆ ಹರಿದು ಬರುತ್ತಿರುವ ಕೊಳಚೆ ನೀರುಗಳು ಕಟ್ಟಿ ನಿಂತಿರುವುದನ್ನು ವೀಕ್ಷಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ.

ವಸತಿಗೃಹಗಳ ಕೊಠಡಿಗಳಲ್ಲಿ ಮರಳು ಮಾಫಿಯಾದವರು, ಜೂಜಾಟದವರು ಸೇರಿದಂತೆ ಸುಮಾರು 10ರಿಂದ 18 ಮಂದಿ ವಾಸಿಸುತ್ತಿರುವುದಾಗಿ ನಾಗರಿಕರು ಆರೋಪಿಸುತ್ತಿದ್ದಾರೆ. ಮಂಜೇಶ್ವರ ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ, ರಿಕ್ಷಾ ನಿಲ್ದಾಣ ಹಾಗೂ ಮಂಜೇಶ್ವರದ ಜನನಿಬಿಡ ಕೇಂದ್ರ ರಾಗಂ ಜಂಕ್ಷನ್ ಇದೀಗ ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಬದಲಾಗಿದೆ. ಬಸ್ ಹಾಗೂ ವಾಹನಗಳಿಗೆ ಕಾಯುವವರು ಮತ್ತು ಪೇಟೆಗೆ ಬರುವ ಸಾರ್ವಜನಿಕರು ಸೊಳ್ಳೆಗಳ ಕಚ್ಚುವಿಕೆಯಿಂದ ರೋಗಕ್ಕೆ ತುತ್ತಾಗುತ್ತಿದ್ದಾರೆ. ಸಂಬಂಧಪಟ್ಟವರು ಇತ್ತ ಗಮನ ಹರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಮುಂದಾಗುವುದಾಗಿ ನಾಗರಿಕರು ತಿಳಿಸಿದ್ದಾರೆ.