`ನನ್ನ ಜೀವನದಲ್ಲಿ ಇಬ್ಬರು ಇದ್ದಾರೆ’

ಪ್ರ : ನಾನು ಕಳೆದ ವರ್ಷವಷ್ಟೇ ಡಿಗ್ರಿ ಮುಗಿಸಿ ಕೆಲಸಕ್ಕೆ ಸೇರಿಕೊಂಡಿದ್ದೇನೆ. ನನ್ನ ಸಮಸ್ಯೆಯೆಂದರೆ ನನಗೀಗ ಇಬ್ಬರು ಬಾಯ್‍ಫ್ರೆಂಡ್ಸ್ ಇದ್ದಾರೆ. ಒಬ್ಬನ ಜೊತೆ ನಾನು ನನ್ನ ಕಾಲೇಜುದಿನಗಳಿಂದಲೇ ಡೇಟಿಂಗ್ ಮಾಡುತ್ತಿದ್ದೆ. ಇನ್ನೊಬ್ಬ ಈಗ ನನ್ನ ಸಹೋದ್ಯೋಗಿ. ಅವನ ಜೊತೆಯೂ ಓಡಾಡುತ್ತಿದ್ದೇನೆ. ನನ್ನ ಕಾಲೇಜಿನ ಬಾಯ್ ಫ್ರೆಂಡ್ ಈಗ ಬೇರೆ ಕೆಲಸದಲ್ಲಿ ಇದ್ದಾನೆ. ಅವನು ಹೆಚ್ಚು ಮಾತಾಡುವವನಲ್ಲ. ಆದರೆ ತುಂಬಾ ಕೇರಿಂಗ್. ಯಾವ ಸಮಸ್ಯೆಯಿದ್ದರೂ ನಾನು ಅವನ ಹತ್ತಿರವೇ ಹೇಳಿಕೊಳ್ಳುತ್ತಿದ್ದೆ. ಅವನೊಬ್ಬ ಜೊತೆಗಿದ್ದರೆ ನನಗೆ ಚಿಂತೆಯೇ ಇರುತ್ತಿರಲಿಲ್ಲ. ಅವನು ನನ್ನನ್ನು ತುಂಬಾ ಪ್ರೀತಿಸುತ್ತಾನೆ. ಈಗಿನ ನನ್ನ ಗೆಳೆಯ ಫನ್ ಲವ್ವಿಂಗ್. ಗಮ್ಮತ್ತು ಮಾಡುತ್ತಿರುವುದೇ ಅವನ ಕೆಲಸ. ಅವನ ಜೊತೆಯಿದ್ದರೆ ಸಮಯ ಕಳೆದಿದ್ದೇ ಗೊತ್ತಾಗುವುದಿಲ್ಲ. ಈತನನ್ನೇ ಸಂಗಾತಿ ಮಾಡಿಕೊಂಡರೆ ಜೀವನವನ್ನು ಜಾಲಿಯಾಗಿ ಕಳೆಯಬಹುದು ಅನಿಸುತ್ತಿದೆ. ಆದರೆ ನನ್ನ ಆ ಕಾಲೇಜು ಹುಡುಗನಿಂದ ದೂರವಾಗಲೂ ಮನಸ್ಸು ಬರುತ್ತಿಲ್ಲ. ಅವನಿಂದ ನಾನು ದೂರ ಹೋದರೆ ಅವನ ಹೃದಯವೇ ಒಡೆದುಹೋಗಬಹುದು. ಅವನ ಜೊತೆಗಿನ ದಿನಗಳನ್ನು ಮರೆಯುವುದು ಕಷ್ಟವಾದರೂ ಈಗಿನ ಹುಡುಗನ ಜೊತೆ ನನಗೆ ಖುಶಿ ಕೊಡುತ್ತಿದೆ. ಯಾರ ಜೊತೆ ನಾನಿರಲಿ ಈಗ? ಅಥವಾ ಇಬ್ಬರ ಜೊತೆಯೂ ಒಡನಾಟ ಇಟ್ಟುಕೊಂಡರೆ ತಪ್ಪಾ?

: ಇದೆಂತಹ ಕ್ರೇಜ್. ಇಬ್ಬರನ್ನೂ ನೀವು ಜಾಸ್ತಿ ದಿನ ಬಾಯ್‍ಫ್ರೆಂಡ್ಸಾಗಿ ಇಟ್ಟುಕೊಳ್ಳುವುದು ಸರಿಯಲ್ಲ. ಈಗಲೇ ನೀವೊಂದು ನಿರ್ಧಾರಕ್ಕೆ ಬರದಿದ್ದರೆ ಆ ಹುಡುಗರಿಗೇ ನಿಮ್ಮ ಕಣ್ಣುಮುಚ್ಚಾಲೆಯಾಟ ಗೊತ್ತಾಗಿ ಅವರೇ ನಿಮ್ಮನ್ನು ದೂರಮಾಡುವ ಚಾನ್ಸಸ್ ಇರುತ್ತದೆ. ಅವರು ನಿಮ್ಮನ್ನು ಡಂಪ್ ಮಾಡುವ ಮೊದಲೇ ನೀವೇ ನಿಮಗೆ ಯಾರು ಬೇಕೆಂದು ತೀರ್ಮಾನಿಸುವುದು ಒಳ್ಳೆಯದು. ನಿಮ್ಮ ಕಾಲೇಜಿನ ಹುಡುಗನನ್ನು ನೀವು ಬಹುದಿನಗಳಿಂದ ಬಲ್ಲಿರಿ. ಅವನೂ ನಿಮ್ಮನ್ನು ಸಂಗಾತಿಯೆಂತಲೇ ತೀರ್ಮಾನಿಸಿದ್ದಾನೆ. ಆದರೆ ನಿಮಗೇ ಅವನ ಬಗ್ಗೆ ಈಗ ಬೋರ್ ಅನಿಸಿರಬಹುದು. ಅದಕ್ಕಾಗಿಯೇ ನಿಮ್ಮ ಮನಸ್ಸೀಗ ಹೊಸತನವನ್ನು ಬಯಸುತ್ತಿರಬಹುದು, ಹೊಸ ಹುಡುಗನ ಆಕರ್ಷಣೆಗೂ ಬಿದ್ದಿದ್ದೀರಿ ಈಗ. ಆದರೆ ಈ ಹುಡುಗ ನಿಮ್ಮನ್ನು ನೀವು ಬಯಸುವಷ್ಟೇ ಪ್ರೀತಿಸುತ್ತಾನಾ ಅಥವಾ ಅವನಿಗೆ ನೀವೊಬ್ಬರು ಟೈಮ್ ಪಾಸಿಗಾಗಿ ಬೇಕಾಗುವ ವಸ್ತು ಮಾತ್ರವಾ? ಕೆಲವರಿಗೆ ಸಮಯ ಕಳೆದಂತೆ ಪ್ರಯೋರಿಟಿಯೂ ಬದಲಾಗುತ್ತದೆ. ಒಮ್ಮೆ ಬಯಸಿದ್ದು ಜೀವನಪೂರ್ತಿ ಇಷ್ಟವಾಗಬೇಕೆಂದೂ ಇಲ್ಲ. ಯಾವುದಕ್ಕೂ ಈಗ ನೀವು ಹೃದಯದ ಮಾತು ಕೇಳಿ. ಬರೀ ಕ್ಷಣಿಕವಾಗಿ ಖುಶಿ ಸಿಗುತ್ತದೆ ಅಂತ ಹೋಗಿ ಮುಂದೆ ಜೀವನದಲ್ಲಿ ಪಶ್ಚಾತ್ತಾಪ ಪಡುವ ಕೆಲಸ ಮಾತ್ರ ಮಾಡಬೇಡಿ. ತಾಳ್ಮೆಯಿಂದ ಆಲೋಚಿಸಿ ಯಾರು ನಿಮಗೆ ಸರಿಯಾದವರು ಅಂತ ಈಗಲೇ ನೀವು ನಿರ್ಧರಿಸಿ ಅವರಿಗೇ ನಿಷ್ಠಳಾಗಿರುವುದು ಒಳ್ಳೆಯದು.