ಕಲ್ಲು ಗಣಿಗೆ ದಾಳಿ : ಲಾರಿ, ಪವರ ಟಿಲ್ಲರ್ ವಶ

ನಮ್ಮ ಪ್ರತಿನಿಧಿ ವರದಿ

ಅಂಕೋಲಾ : ಬೆಳಸೆ ಗ್ರಾಮ ಪಂಚಾಯತ ವ್ಯಾಪ್ತಿಯ ಹಿಚ್ಕಡದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಮೀಸಲಿಟ್ಟ ಸ್ಥಳದಲ್ಲಿ ಅನಧಿಕೃತವಾಗಿ ಕಲ್ಲುಗಣಿಯನ್ನು ನಡೆಸಲಾಗುತ್ತಿದೆ ಎಂದು ಆರೋಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅಧಿಕಾರಿಗಳ ತಂಡ ಒಂದು ಲಾರಿ, ಏಳು ಪವರ್ ಟಿಲ್ಲರ್ ಹಾಗೂ ಸಲಕರಣೆಗಳನ್ನು ವಶಪಡಿಸಿಕೊಂಡಿದೆ.

ತಾಲೂಕಿನ ಬೆಳಸೆ ಗ್ರಾಮ ಪಂಚಾಯತ ವ್ಯಾಪ್ತಿಯ ಸರಹದ್ದಿನಲ್ಲಿರುವ ಹಿಚ್ಕಡದಲ್ಲಿ ಸುಮಾರು 29 ಎಕರೆ ಜಾಗವನ್ನು ಜಿಲ್ಲಾ ಕಾರಾಗೃಹದ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ಈ ಸ್ಥಳದಲ್ಲಿ ಹಿಂದಿನಿಂದಲೂ ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ಗ್ರಾಮ ಪಂಚಾಯತ ಅಧ್ಯಕ್ಷ ಶಂಕರ ಗೌಡ ನೇತೃತ್ವದಲ್ಲಿ ಸದಸ್ಯರು ತಾಲೂಕು ದಂಡಾಧಿಕಾರಿಗಳಿಗೆ ಹಾಗೂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಅಂದಿನ ತಹಶೀಲ್ದಾರ್ ಲಾಂಜೇಕರ ನೇತೃತ್ವದ ತಂಡ ಪರಿಶೀಲನೆ ನಡೆಸಿತ್ತು.

ಇವೆಲ್ಲವುಗಳ ನಡುವೆಯೂ ಅನಧಿಕೃತ ಕಲ್ಲು ಗಣಿಗಾರಿಕೆ ದಂಧೆ ಅಳುಕಿಲ್ಲದೆ ಸಾಗತೊಡಗಿದ್ದು, ಮತ್ತೆ ದೂರು ದಾಖಲಿಸುವಲ್ಲಿ ಗ್ರಾಮ ಪಂಚಾಯತದವರು ಮುಂದಾಗಿದ್ದರು. ಆದರೆ ಏಕಾಏಕಿ ದಾಳಿ ನಡೆಸಿದ ಪ್ರಭಾರಿ ತಹಶೀಲ್ದಾರ ದುಂಡಪ್ಪ ಕೌಮಾರ ನೇತೃತ್ವದ ತಂಡ ಗಣಿಗಾರಿಕೆಗೆ ಬಳಸಿದ್ದ ಪವರ್ ಟಿಲ್ಲರ್ ಹಾಗೂ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳು ಹಿಚ್ಕಡದ ರಾಮದಾಸ ರಾಮಚಂದ್ರ ನಾಯಕ ಹಾಗೂ ಆದಿತ್ಯ ಬಾಬು ನಾಯಕ ಅವರಿಗೆ ಸೇರಿವೆ ಎಂದು ತಿಳಿದುಬಂದಿದೆ.

LEAVE A REPLY