ಬಲಿಗಾಗಿ ಕಾಯುತ್ತಿದೆ ಕ್ವಾರಿ ಗುಂಡಿಗಳು

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಜಲಾಶಯದಂತೆ ನೀರು ತುಂಬಿಕೊಂಡಿರುವ ವಿಟ್ಲ ಕಸಬಾ ಮತ್ತು ಅಳಿಕೆ ಪಂಚಾಯತ್ ವ್ಯಾಪ್ತಿಯ ಕಲ್ಲಿನ ಕ್ವಾರಿಗಳು ರಜಾ ದಿನಗಳಲ್ಲಿ ಈಜಾಡುವ ಹುಚ್ಚು ಸಾಹಸದ ಮಕ್ಕಳ ಪ್ರಾಣ ಬಲಿಗಾಗಿ ಕಾಯುತ್ತಿವೆ.

ವಿಟ್ಲ ಕಸಬಾ ಗ್ರಾಮದ ಕಾಂತಡ್ಕ ದರ್ಬೆ ಜನತಾ ಕಾಲೊನಿಯ ಕಲ್ಲಿನ ಕ್ವಾರಿ ಮತ್ತು ಅಳಿಕೆ ಗ್ರಾಮದ ದರ್ಬೆ ಬಾಂಡಿಲು

ಎಂಬಲ್ಲಿರುವ ಕಲ್ಲಿನ ಕ್ವಾರಿಗಳು ಬಡ ಮಕ್ಕಳ ಪ್ರಾಣಕ್ಕಾಗಿ ಕಾದುಕುಳಿತಿವೆ. ರಜಾ ದಿನಗಳಲ್ಲಿ ಈ ಭಾಗದ ಸುಮಾರು 30ಕ್ಕೂ ಹೆಚ್ಚು ಪುಟಾಣಿಗಳು ಕಲ್ಲಿನ ಕ್ವಾರಿಯ ನೀರಿನಲ್ಲಿ ಗಂಟೆಗಟ್ಟಲೆ ಈಜಾಡುವ ಹುಚ್ಚು ಸಾಹಸದಲ್ಲಿ ಮೈಮರೆಯುತ್ತಿದ್ದಾರೆ.

ಹತ್ತು ವರ್ಷಗಳಿಂದ ಗಣಿಗಾರಿಕೆ ನಡೆಸಿ ನೆಲ ಬಗೆಯುವ ಮೂಲಕ ಕೋಟಿಗಟ್ಟಲೆ ಹಣ ಜೇಬಿಗಿಳಿಸಿದ್ದ ಕೇರಳ ಮೂಲದ ಕಲ್ಲು ಗಣಿ ಮಾಲಿಕರು ಇದೀಗ ಬಿಟ್ಟು ಹೋಗಿದ್ದಾರೆ. ಪರಿಣಾಮವಾಗಿ ಐವತ್ತು ಅಡಿಗಿಂತಲೂ ಹೆಚ್ಚು ಆಳ ಹೊಂದಿರುವ ಗುಂಡಿಗಳಲ್ಲಿ ಇದೀಗ ಜಲಾಶಯದಂತೆ ನೀರು ತುಂಬಿಕೊಂಡಿವೆ. ಜಿಲ್ಲೆಯಲ್ಲಿ ಅದೆಷ್ಟೋ ಬಡ ಮಕ್ಕಳ ಪ್ರಾಣ ಹೋಗಿದ್ದರೂ ಇನ್ನೂ ಪಂ ಆಡಳಿತ ಮತ್ತು ಕಂದಾಯ ಅಧಿಕಾರಿಗಳ ಕಣ್ಣಿಗೆ ಮಾತ್ರ ಇಲ್ಲಿನ ಕ್ವಾರಿ ಗುಂಡಿಗಳು ಕಂಡಿಲ್ಲವಾಗಿದೆ. ದುರಂತ ನಡೆದ ಬಳಿಕ ಸ್ಥಳಕ್ಕಾಗಮಿಸಿ ಮೊಸಳೆ ಕಣ್ಣೀರು ಹಾಕಿ ಪರಿಹಾರದ ಭರವಸೆ ಕೊಡುವ ಬದಲು ಮುನ್ನವೇ ಎಚ್ಚೆತ್ತುಕೊಳ್ಳುವುದು ಒಳಿತಲ್ಲವೇ ಎಂಬುದು ಇಲ್ಲಿನ ಬಡ ಕುಟುಂಬಗಳ ಮಾತಾಗಿದೆ.

ಬಡ ಮಕ್ಕಳು ಬಲಿಯಾಗುವ ಮುನ್ನವಾದರೂ ಪಂ ಆಡಳಿತ ಮತ್ತು ಕಂದಾಯ ಇಲಾಖೆ ಎಚ್ಚೆತ್ತುಕೊಳ್ಳುವುದೋ ಕಾದು ನೋಡಬೇಕಿದೆ.