ತ್ಯಾಜ್ಯ ವಿಲೇ ಘಟಕಕ್ಕೆ ಕಲ್ಲು ಕ್ವಾರಿ ಮಾಲಕ ಅಡ್ಡಿ

ಬಂಟ್ವಾಳ ಪುರಸಭಾಧ್ಯಕ್ಷ ಆರೋಪ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಇಲ್ಲಿನ ಪುರಸಭಾ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ನಡೆಸಲು ಸಜಿಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ನಿರ್ಮಾಣಗೊಳ್ಳುತ್ತಿರುವ ಘನ ತ್ಯಾಜ್ಯ ಘಟಕ ನಿರ್ಮಾಣ ಸಚಿವರ ಆದ್ಯತೆಯಾಗಿದ್ದು, ಇದಕ್ಕೆ ಕಾಂಗ್ರೆಸ್ಸಿನ ಯಾವುದೇ ಘಟಕ ವಿರೋಧವಾಗಿಲ್ಲ. ಈಗಾಗಲೇ ಅಲ್ಲಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಪುರಸಭಾಧ್ಯಕ್ಷ ಪಿ ರಾಮಕೃಷ್ಣ ಆಳ್ವ ಮಾಹಿತಿ ನೀಡಿದರು.

ಪುರಸಭಾ ಸಾಮಾನ್ಯ ಸಭೆಯಲ್ಲ ಸದಸ್ಯ ಮುಹಮ್ಮದ್ ಇಕ್ಬಾಲ್ ಗೂಡಿನಬಳಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, “ಇತ್ತೀಚೆಗೆ ವಲಯ ಕಾಂಗ್ರೆಸ್ ಹೆಸರಿನಲ್ಲಿ ನಡೆದ ಪ್ರತಿಭಟನೆಗೂ, ಕಾಂಗ್ರೆಸ್ಸಿಗೂ, ಸಚಿವರಿಗೂ ಯಾವುದೇ ಸಂಬಂಧವಿಲ್ಲ. ಇದು ಕೇವಲ ಜಿ ಪಂ ಮಾಜಿ ಸದಸ್ಯ ಅಬ್ಬಾಸ್ ಅವರ ವೈಯಕ್ತಿಕ ಹಿತಾಸಕ್ತಿಯಿಂದ ಕೂಡಿರುವ ಪ್ರತಿಭಟನೆಯಾಗಿದ್ದು, ಅಬ್ಬಾಸ್ ಅವರ ಕಲ್ಲಿನ ಕ್ವಾರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ನಡೆಸಿದ ಸ್ವಹಿತಾಸಕ್ತಿಯ ಪ್ರತಿಭಟನೆ ಮಾತ್ರ” ಎಂದು ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಆರೋಪಿಸಿದರು.

ಇದಕ್ಕೆ ಧ್ವನಿಗೂಡಿಸಿದ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು ಅಧ್ಯಕ್ಷರ ಮಾತಿಗೆ ಸಂಪೂರ್ಣ ಸಹಮತ ವ್ಯಕ್ತಪಡಿಸಿದರು.

“ಕಂಚಿನಡ್ಕ ಪದವು ತ್ಯಾಜ್ಯ ಘಟಕ ನಿರ್ಮಾಣಕ್ಕೆ ಸಂಬಂಧಿಸಿ ಸಚಿವರುಗಳಾದ ರಮಾನಾಥ ರೈ ಹಾಗೂ ಯು ಟಿ ಖಾದರ್ ಮಧ್ಯೆ ಯಾವುದೇ ಭಿನ್ನ ನಿಲುವು ಇಲ್ಲ. ಸಚಿವ ಯು ಟಿ ಖಾದರ್ ಅವರನ್ನು ಅಬ್ಬಾಸ್ ಅವರೇ ಒಂದಿಬ್ಬರು ಬೆಂಬಲಿಗರನ್ನು ಇಟ್ಟುಕೊಂಡು ಹಾದಿ ತಪ್ಪಿಸುತ್ತಿರುವುದು ಇದೀಗ ಸಚಿವರಿಗೂ ಮನವರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇಬ್ಬರೂ ಸಚಿವರ ಸಮ್ಮುಖ ಪುರಸಭೆ ಹಾಗೂ ಸ್ಥಳೀಯ ಗ್ರಾ ಪಂ ಸದಸ್ಯರ ಸಭೆ ನಡೆಸಿ ಉಳಿದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲಾಗುವುದು” ಎಂದು ರಾಮಕೃಷ್ಣ ಆಳ್ವ ತಿಳಿಸಿದರು.

“ಈಗಾಗಲೇ ಕಂಚಿನಡ್ಕಪದವು ತ್ಯಾಜ್ಯ ಘಟಕಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ಸ್ಪಷ್ಟ ಆದೇಶ ನೀಡಿದ್ದು, ಆದೇಶ ಪ್ರಕಾರವೇ ಪುರಸಭಾಡಳಿತ ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ” ಎಂದು ಆಳ್ವ ಸ್ಪಷ್ಟಪಡಿಸಿದರು.