ಕೊರಗರ ಭೂಮಿ ಅತಿಕ್ರಮಣ ಬೆಳಕಿಗೆ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಪುತ್ತಿಗೆ ಗ್ರಾಮದ ಕೊಡ್ಯಡ್ಕ ಬಂಕಿಮಜಲು ಎಂಬಲ್ಲಿ ಕೊರಗರ ಕೃಷಿ ಭೂಮಿಯನ್ನು ಅತಿಕ್ರಮಿಸಿ ಕೆಂಪು ಕಲ್ಲು ಕ್ವಾರಿ ನಡೆಸುತ್ತಿರುವುದು ಕಂದಾಯ ಇಲಾಖೆ ನಡೆಸಿದ ಸರ್ವೆ ಮೂಲಕ ಬೆಳಕಿಗೆ ಬಂದಿದೆ.

ಸರಕಾರ ಸಮಗ್ರ ಗಿರಿಜನ ಯೋಜನೆಯಡಿಯಲ್ಲಿ ಸುಮಾರು 15 ವರ್ಷಗಳ ಹಿಂದೆ ಬಂಕಿಮಜಲು ಎಂಬಲ್ಲಿ 20 ಫಲಾನುಭವಿಗಳಿಗೆ ತಲಾ ಒಂದು ಎಕ್ರೆಯಂತೆ ನಿವೇಶನ ಮಂಜೂರು ಮಾಡಿತ್ತು.

ಈ ನಿವೇಶನದಲ್ಲಿ ಕೆಲವು ಕುಟುಂಬ ಮಾತ್ರ ವಾಸವಾಗಿದ್ದು, ಇನ್ನು ಕೆಲವರು ನಿವೇಶನವನ್ನು ಬಳಸಿಕೊಂಡಿರಲಿಲ್ಲ. ಆನಂದ ಮತ್ತು ಶಾಂತಿ ವಾಸವಾಗಿರುವ ನಿವೇಶನದ ಹತ್ತಿರವೆ ಕೆಂಪು ಕಲ್ಲು ಕ್ವಾರಿ ನಡೆಯುತ್ತಿದ್ದು, ಕೊರಗರ ಭೂಮಿ ಅತಿಕ್ರಮಿಸಿ ಕ್ವಾರಿ ನಡೆಯುತ್ತಿರುವ ಬಗ್ಗೆ ಶಾಂತಿ ತಹಶೀಲ್ದಾರಗೆ ದೂರು ನೀಡಿದ್ದು ಈ ಸುದ್ದಿ ಮಾಧ್ಯಮದಲ್ಲಿ ಪ್ರಕಟವಾಗಿತ್ತು.

ಶುಕ್ರವಾರ ಮೂಡುಬಿದಿರೆ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಸರ್ವೆಯರ್ ಮೂಲಕ ವಿವಾದಿತ ಜಾಗದ ಸರ್ವೆ ನಡೆಸಿದಾಗ ಸುಮಾರು 20 ಸೆಂಟ್ಸ್ ಕೊರಗರ ಭೂಮಿ ಕಲ್ಲು ಕ್ವಾರಿಗೆ ಅತಿಕ್ರಮಣವಾಗಿರುವುದು ಬೆಳಕಿಗೆ ಬಂದಿದೆ. ನಮಗೆ ಗೊತ್ತಿಲ್ಲದೆ ಜಾಗ ಅತಿಕ್ರಮಣವಾಗಿದ್ದು, ಅದನ್ನು ಕೊರಗರಿಗೆ ಬಿಟ್ಟು ಕೊಡುತ್ತೇವೆ ಎಂದು ಕ್ವಾರಿ ಮಾಲಕ ತಹಶೀಲ್ದಾರಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಸುಮಾರು 20 ಕೊರಗ ಕುಟುಂಬಕ್ಕೆ ಇಲ್ಲಿ ತಲಾ ಒಂದು ಎಕ್ರೆಯಂತೆ ಕೃಷಿ ಭೂಮಿ ಮಂಜೂರಾಗಿ ಹಕ್ಕುಪತ್ರ ನೀಡಿದ್ದರೂ ಕೇವಲ ಮೂರು ಕುಟುಂಬ ಮಾತ್ರ ಇಲ್ಲಿ ವಾಸ್ತವ್ಯವಿತ್ತು.