ಜಿಲ್ಲಾಧಿಕಾರಿ ಕಚೇರಿ ಎದುರು ಕ್ವಾರಿ ಸಂಘಟನೆ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನಾ ಧರಣಿ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಆಲ್ ಕೇರಳ ಕ್ವಾರಿ ಆಂಡ್ ಕ್ರಶರ್ಸ್ ಕೋರ್ಡಿನೇಶನ್ ಸಂಘಟನೆಯ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಧರಣಿಯಲ್ಲಿ ಹಲವಾರು ಮಂದಿ ಪಾಲ್ಗೊಂಡರು. ಸಣ್ಣಮಟ್ಟದ ಕಗ್ಗಲ್ಲಿನ ವಲಯಗಳನ್ನು ರಕ್ಷಿಸಬೇಕು, ಇವುಗಳ ಕಾರ್ಯಕ್ಕೆ ತೊಡಕಾಗುವಂತಹ ನೀತಿಯನ್ನು ಹಿಂಪಡೆಯಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

ವಿದ್ಯಾನಗರ ಸರಕಾರಿ ಕಾಲೇಜು ಪರಿಸರದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ನೂರಾರು ಮಂದಿ ಭಾಗಿಯಾದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನಾ ಧರಣಿಯನ್ನು ಸಿಐಟಿಯು ರಾಜ್ಯ ಕಾರ್ಯದರ್ಶಿ ಪಿ ರಾಘವನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ರಾಜ್ಯದಲ್ಲಿ ಇಂದು ಭಾರೀ ಪ್ರಮಾಣದಲ್ಲಿರುವ ಕ್ವಾರಿಗೆ ಸಂಬಂಧಿಸಿ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಅದನ್ನು ನಮಗೆ ಅಲ್ಲಗೆಳೆಯಲು ಸಾಧ್ಯವಿಲ್ಲ. ಪ್ರಕೃತಿಯನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ಪ್ರಕೃತಿ ವಿರುದ್ಧವಾದ ಹಲವು ಘಟನೆಗಳು ಇಂದು ನಡೆಯುತ್ತಿವೆ. ಅದಕ್ಕೆ ಅನೂಕೂಲಕರವಾಗಿ ನಿಲ್ಲಲು ಸಾಧ್ಯವಿಲ್ಲ. ಇತ್ತೀಚಿನ ವರದಿ ಪ್ರಕಾರ ಸುಪ್ರೀಂ ಕೋರ್ಟು ಕೂಡಾ ಕ್ವಾರಿಗಳ ವಿರುದ್ಧವಾದ ನಿಲುವನ್ನು ಪ್ರಕಟಿಸಿದೆ. ಆದರೆ ನಮ್ಮ ಬೇಡಿಕೆ ಏನಂದ್ರೆ ಕೇರಳ ಪರಿಸ್ಥಿತಿಗೆ ಯಾವುದೇ ಅಡಚಣೆ ಇಲ್ಲದಂತಹ ಸಣ್ಣಮಟ್ಟದ ಕ್ವಾರಿಗಳನ್ನು ಸರಕಾರ ಸಂರಕ್ಷಿಸಬೇಕಾಗಿದೆ, ಇದಕ್ಕೆ ಬೇಕಾದ ನಿಯಮಗಳನ್ನು ಜಾರಿಗೆ ತರಬೇಕಾಗಿದೆ” ಎಂದು ಹೇಳಿದರು.