ಹನುಮಸಾಗರದ ಈ ಸರಕಾರಿ ಶಾಲೆಗೆ ಖಾಸಗಿ ವಿದ್ಯಾರ್ಥಿಗಳೂ ಸೇರುತ್ತಿದ್ದಾರೆ

ವಿಜಯಪುರ : ಹೆತ್ತವರು ಹೆಚ್ಚು ಶುಲ್ಕ ತೆತ್ತಾದರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೇ ಸೇರಿಸುತ್ತಿರುವುದರಿಂದ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇತ್ತೀಚಿಗಿನ ವರ್ಷಗಳಲ್ಲಿ ಸಾಕಷ್ಟು ಕುಸಿತ ಕಂಡಿದೆ. ಆದರೆ ವಿಜಯಪುರ ಜಿಲ್ಲೆಯ ಹನುಮಸಾಗರ ಗ್ರಾಮದ ಸರಕಾರಿ ಶಾಲೆಯೊಂದರ ವಿಷಯದಲ್ಲಿ ಮಾತ್ರ ಈ ವಿಚಾರ ನಿಜವಲ್ಲ. ಇಲ್ಲಿನ ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿರುವ ಹಲವು ವಿದ್ಯಾರ್ಥಿಗಳೂ ಈಗ ಈ ಸರಕಾರಿ ಶಾಲೆಗೆ ಸೇರ್ಪಡೆಗೊಂಡಿದ್ದಾರೆಂದರೆ ಅದು ಆಶ್ಚರ್ಯವೇ ಸರಿ. ಈ ಬದಲಾವಣೆಗೆ ಈ ಶಾಲೆಯ ಕೆಲ ಉತ್ಸಾಹಿ ಹಳೆ ವಿದ್ಯಾರ್ಥಿಗಳೇ ಕಾರಣ.

ದೇಶಕ್ಕೆ ಸ್ವಾತಂತ್ರ್ಯ ದೊರೆತ ದಿನದಂದು ಆರಂಭವಾಗಿದ್ದ ಈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲ ತಿಂಗಳುಗಳ ಹಿಂದೆ ಕೇವಲ 60 ವಿದ್ಯಾರ್ಥಿಗಳಿದ್ದರೆ ಈಗ ಇಲ್ಲಿಗೆ 112 ಹೆಚ್ಚುವರಿ ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ. ಅಂದ ಹಾಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಈ ಹಿಂದೆ ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿದ್ದರು.

ವಿವಿಧ ಸರಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ದುಡಿಯುತ್ತಿದ್ದ ಈ ಶಾಲೆಯ ಐದು ಮಂದಿ ಹಳೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯಲ್ಲಿ ಕುಸಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಿಂದ ತೀವ್ರ ನೊಂದು ಏನಾದರೂ ಮಾಡಲೇಬೇಕೆಂದು ಯೋಚಿಸಿ ಕಳೆದ ಬೇಸಿಗೆ ರಜಾ ಸಮಯದಲ್ಲಿ ಬ್ಲಾಕ್ ಶಿಕ್ಷಣಾಧಿಕಾರಿಗಳ ಅನುಮತಿಯೊಂದಿಗೆ ಶಾಲೆಯಲ್ಲಿ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ನುರಿತ ಶಿಕ್ಷಕರಿಂದ ಕೋಚಿಂಗ್ ಕ್ಲಾಸ್ ಆಯೋಜಿಸಿದ್ದರು. “ಈ ಪ್ರಯತ್ನದ ಫಲವಾಗಿ ಹತ್ತಿರದ ಗ್ರಾಮಗಳಲ್ಲಿರುವ ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿರುವ ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಲು ಹಲವು ಹೆತ್ತವರು ಮಂದೆ ಬಂದಿದ್ದರು” ಎಂದು ಶಿಕ್ಷಕರೂ, ಹಳೆ ವಿದ್ಯಾರ್ಥಿಯೂ ಆದ ಜಿ ಎಸ್ ಜಮಖಂಡಿ ಹೇಳಿದ್ದಾರೆ.

ಈ ಶಾಲೆಗೆ ಮೂರು ಮಂದಿ ಪೂರ್ಣಕಾಲಿಕ ಶಿಕ್ಷಕರು, ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ, ಶಾಲೆಯ ನವೀಕರಣಕ್ಕಾಗಿ ರೂ 10 ಲಕ್ಷ ಹಾಗೂ ಇ-ಟೀಚಿಂಗ್ ಸೌಲಭ್ಯವೊದಗಿಸಲು ಸಹಾಯ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಆಶ್ವಾಸನೆ ನೀಡಿದ್ದಾರೆಂದು ಗಣಿತ ಶಿಕ್ಷಕಿ ಲಕ್ಷ್ಮಿ ಹೊಸಮನಿ ಹೇಳುತ್ತಾರೆ.