ಹಬ್ಬಗಳು ಬಂತಂದ್ರೆ ಖಾಸಗಿ ಬಸ್ ಪ್ರಯಾಣದರ ಗಗನಕ್ಕೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ
ಮಂಗಳೂರು : ಹಬ್ಬದ ಋತು ಬಂತೆಂದರೆ ಸಾಕು ಎಲ್ಲಾ ದರಗಳು ದುಪ್ಪಟ್ಟಾಗುತ್ತವೆ. ಇದೀಗ ಖಾಸಗಿ ಬಸ್ ಪ್ರಯಾಣಿಕರು ಕೂಡಾ ಈ ದುಪ್ಪಟ್ಟು ದರದಿಂದ ಕಂಗೆಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ಈ ವ್ಯವಸ್ಥೆಯಲ್ಲಿ ಒಂದು ಸರಿಯಾದ ಹಿಡಿತವಿರದ ಕಾರಣ ಖಾಸಗಿ ಬಸ್ ಪ್ರಯಾಣ ದರಗಳು ಯಾವಾಗ ಎಂಬಂತೆ ಏರಿಕೆಯಾಗುತ್ತಿದೆ. ಇದೀಗ ಮಕರ ಸಂಕ್ರಾಂತಿ ಮತ್ತು ಪೊಂಗಲ್ ಹಬ್ಬದ ಸಂಭ್ರಮದಲ್ಲೂ ರಾಜ್ಯದಿಂದ ಅನ್ಯ ರಾಜ್ಯಗಳಿಗೆ ತೆರಳುವ ಖಾಸಗಿ ಬಸ್ ಪ್ರಯಾಣ ದರಗಳು ದುಪ್ಪಟ್ಟಾಗಿದ್ದು, ಪ್ರಯಾಣಿಕರು ಕಂಗೆಡುವಂತಾಗಿದೆ.
ಕರ್ನಾಟಕದಲ್ಲಿ ಆ್ಯಪ್ ಆಧರಿತ ಸೇವೆಯನ್ನು ಕಾರು ಚಾಲಕರು ಅಳವಡಿಸಿಕೊಂಡ ಬಳಿಕ ಇದೇ ಮಾದರಿಯ ದರವನ್ನು ಬಸ್ ಚಾಲಕರು ಕೂಡಾ ಅನ್ವಯಿಸತೊಡಗಿದ್ದಾರೆ. ಹೀಗಾಗಿ ಸರಕಾರವು ಕೂಡಾ ಕಣ್ಣುಮುಚ್ಚಿಕೊಂಡು ಮೌನಕ್ಕೆ ಶರಣಾಗಿದೆ. ಖಾಸಗಿ ಬಸ್ಸುಗಳ ದರ ಸಮರಕ್ಕೆ ಕಡಿವಾಣ ಹಾಕಲು ಸಾರಿಗೆ ಇಲಾಖೆಗೆ ಸಾಧ್ಯವಾಗುತ್ತಿಲ್ಲ.
ಖಾಸಗಿ ಬಸ್ ಉದ್ಯಮಗಳನ್ನು ಕೆಲವು ರಾಜಕಾರಣಿಗಳೇ ನಡೆಸುತ್ತಿದ್ದರೆ, ಇನ್ನು ಕೆಲವು ಬಸ್ಸು ಮಾಲಕರು ರಾಜಕಾರಣಿಗಳ ಕೃಪಾಕಟಾಕ್ಷದಡಿ ಇದ್ದಾರೆ. ಹೀಗಾಗಿ ಬಸ್ಸುಗಳ ದರ ಸಮರಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಇವರ ಯಾವುದೇ ಅಕ್ರಮ ಓಡಾಟಕ್ಕೂ ಕಡಿವಾಣ ಹಾಕುವುದಕ್ಕೆ ಮುಂದಾಗುತ್ತಿಲ್ಲ.
ದೂರುಗಳನ್ನು ಆಧರಿಸಿ ನಾವು ಖಾಸಗಿ ಬಸ್ ಮಾಲಕರ ವಿರುದ್ಧ ಪ್ರಕರಣ ದಾಖಲಿಸಬಹುದು. ಆದರೆ ಈ ರೀತಿ ದೂರು ಕೊಡಲು ಯಾರೂ ಮುಂದಾಗುತ್ತಿಲ್ಲ ಎನ್ನುತ್ತಾರೆ ಸಾರಿಗೆ ಇಲಾಖೆ ಅಧಿಕಾರಿಗಳು. ಸರಕಾರವು ಸ್ವಹಿತಾಸಕ್ತಿಯ ಮೇಲೆ ಕ್ರಮ ಕೈಗೊಳ್ಳಬೇಕು. ಪ್ರಯಾಣಿಕರು ಯಾಕೆ ದೂರು ಕೊಡಬೇಕು ಎನ್ನುತ್ತಾರೆ ಚೆನ್ನೈ ಮತ್ತು ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರಾದ ಜಿ ಸಂತೋಷ್ ಎಂಬವರು.
ಬಸ್ಸುಗಳ ಪ್ರಯಾಣದರವು ವೆಬ್ ಸೈಟುಗಳಲ್ಲಿ ಪ್ರಕಟಿಸಿದ ದರಕ್ಕಿಂತ ದುಪ್ಪಟ್ಟಾಗಿರುತ್ತದೆ ಎಂದು ಹಲವು ಮಂದಿ ದೂರಿದ್ದಾರೆ.