ಬ್ರೋಕರ್ ಎಂದಿದ್ದಕ್ಕೆ ಪುತ್ತೂರು ನಗರಸಭಾ ಅಧ್ಯಕ್ಷರ ವಿರುದ್ಧ ಕೇಸು ಹಾಕುವ ಎಚ್ಚರಿಕೆ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಇಲ್ಲಿನ ನಗರಸಭೆ ಸೇರಿದಂತೆ ಸಾರ್ವಜನಿಕ ಸರಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರಿಗೆ ನಾವು ಉಚಿತ ಸೇವೆ ನೀಡುತ್ತಿದ್ದೇವೆ, ಕಚೇರಿ ವಿಚಾರ ಗೊತ್ತಿಲ್ಲದ ಕೆಲವು ಬಡವರಿಗೆ ನಾವು ಸೇವೆ ಮಾಡುತ್ತಿರುವುದನ್ನು ಸಹಿಸಿದ ಪುತ್ತೂರು ನಗರಸಭಾ ಅಧ್ಯಕ್ಷರು ನಮ್ಮನ್ನು ದಳ್ಳಾಲಿಗಳೆಂದು ಕರೆದು ಪತ್ರಿಕೆಯಲ್ಲಿ ಕೆಲವರ ಹೆಸರನ್ನು ಉಲ್ಲೇಖಿಸಿ ಅವಮಾನ ಮಾಡಿದ್ದಾರೆ ಎಂದು ತಂಡವೊಂದು ಸುದ್ದಿಗೋಷ್ಟಿ ನಡೆಸಿ ಆರೋಪಿಸಿದ್ದು, ಅವಹೇಳನ ಮಾಡಿರುವ ನಗರಸಭಾ ಅಧ್ಯಕ್ಷರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಕಾಂಗ್ರೆಸ್ ಮುಖಂಡ ಇಸಾಕ್ ಸಾಲ್ಮರ, “ಸಾರ್ವಜನಿಕರಿಂದ ದೂರುಗಳು ಬಂದ ಕಾರಣ ಸಾರ್ವಜನಿಕರು ಕೆಲವು ಬ್ರೋಕರುಗಳ ಮೂಲಕ ವ್ಯವಹಾರ ನಡೆಸದೆ ನೇರವಾಗಿ ಕಚೇರಿಗೆ ಬಂದು ಅಧಿಕಾರಿಗಳ ಜೊತೆ ಮಾತನಾಡಿ, ತಮ್ಮ ಕೆಲಸ ಮಾಡಿಸಬೇಕು, ಬ್ರೋಕರುಗಳಿಗೆ ಹಣ ನೀಡಿ ಕೆಲಸ ಮಾಡಿಸಬೇಡಿ. ಪುತ್ತೂರಿನಲ್ಲಿ ಹಲವು ಮಂದಿ ಸಮಾಜ ಸೇವಕರು ಸಾರ್ವಜನಿಕರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಗರಸಭಾ ಅಧ್ಯಕ್ಷರು ಉಲ್ಲೇಖ ಮಾಡಿರುವ ಕೆಲವು ವ್ಯಕ್ತಿಗಳು ಬ್ರೋಕರ್ ಕೆಲಸ ಮಾಡುತ್ತಿಲ್ಲ. ಆದರೂ ಅವರನ್ನು ಬ್ರೋಕರ್ ಎಂದು ಬಿಂಬಿಸಿ ಹೇಳಿಕೆ ನೀಡಿದ್ದಾರೆ. ಇದು ನಗರಸಭಾ ಅಧ್ಯಕ್ಷರ ಅಹಂಕಾರದ ಹೇಳಿಕೆಯಾಗಿದೆ, ಇದನ್ನು ನಾವು ಖಂಡಿಸುತ್ತೇವೆ. ನೇರವಾಗಿ ಕೆಲಸ ಮಾಡಿಸುವವರು ಮಾಡಿಕೊಳ್ಳಲಿ ನಮ್ಮದೇನು ಅಭ್ಯಂಥರವಿಲ್ಲ, ನಮ್ಮಲ್ಲಿ ಸಹಾಯ ಕೇಳಿ ಬಂದವರಿಗೆ ನಾವು ಸಹಾಯ ಮಡಿದ್ದೇವೆಯೇ ವಿನಾ ಹಣಕ್ಕಾಗಿ ನಾವು ಯಾರಿಗೂ ಸಹಾಯ ಮಾಡಿಲ್ಲ. ಸಾರ್ವಜನಿಕರಿಂದ ದೂರು ಬಂದಿದೆ ಎಂದು ಅಧ್ಯಕ್ಷರು ಹೇಳುತ್ತಾರೆ. ಆದರೆ ಈ ಬಗ್ಗೆ ನಾವು ಮಾಹಿತಿ ಹಕ್ಕಿನಡಿ ಕೇಳಿದ್ದೇವೆ. ಆದರೆ ಯಾವುದೇ ದೂರುಗಳು ಬಂದಿಲ್ಲ ಎಂದು ಹಿಂಬರಹ ನೀಡಿದ್ದಾರೆ. ಅಧ್ಯಕ್ಷರು ಸಾರ್ವಜನಿಕವಾಗಿ ಕ್ಷಮೆ ಕೇಳದೇ ಇದ್ದರೆ ನಾವು ಹೋರಾಟ ಮುಂದುವರೆಸುತ್ತೇವೆ” ಎಂದು ಸಾಲ್ಮರ ಹೇಳಿದರು.