ಪುತ್ತೂರು : ಮಾದಕ ವ್ಯಸನಿಗಳಾಗುತ್ತಿರುವ ವಿದ್ಯಾರ್ಥಿ ಸಮೂಹ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ನಗರದಲ್ಲಿ ಮಾದಕದ್ರವ್ಯ ಮಾರಾಟ ಜಾಲ ತೀವ್ರಗೊಂಡಿದ್ದು, ಹಲವು ಮಂದಿ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುತ್ತಿರುವುದು ಪತ್ತೆಯಾಗಿದೆ. ವಿದ್ಯಾರ್ಥಿಗಳು ಗಾಂಜಾ ಸೇವನೆ ದಾಸರಾಗಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ. ಅಂದಾಜಿನ ಪ್ರಕಾರ ನೂರಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಗಾಂಜಾ ಸೇವನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ನಡೆದಿದ್ದ ಹುಟ್ಟುಹಬ್ಬದ ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದ ಕಾಲೇಜಿನ ವಿದ್ಯಾರ್ಥಿಗಳು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ವಿದ್ಯಾರ್ಥಿಗಳನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದ ವೇಳೆ ಇವರು ಗಾಂಜಾ ಸೇವನೆ ಮಾಡಿರುವುದು ಕಂಡುಬಂದಿತ್ತು. ಅಲ್ಲದೆ ಕಳೆದ ವರ್ಷ ಗಾಂಜಾ ಪೂರೈಕೆ ಮಾಡುತ್ತಿದ್ದ ಆರೋಪಿಯೊಬ್ಬನನ್ನು

ಬಂಧಿಸಿ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.  ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಸುಮಾರು 12ಕ್ಕೂ ಅಧಿಕ ಪ್ರಕರಣಗಳಲ್ಲಿ ಗಾಂಜಾ ಮಾರಾಟಗಾರರು ಪತ್ತೆಯಾಗಿದ್ದಾರೆ.

ಇಂತಹ ಪ್ರಕರಣಗಳಲ್ಲಿ ಸುಲಭವಾಗಿ ಜಾಮೀನು ಸಿಗುವುದಿಲ್ಲ ಎಂದು ಗೊತ್ತಿದ್ದರೂ, ಈ ಬಗ್ಗೆ ಆರೋಪಿಗಳು ಚಿಂತಿಸದೇ ಗಾಂಜಾ ಮಾರಾಟದಲ್ಲಿ ಸಕ್ರಿಯರಾಗಿದ್ದಾರೆ. ಪೊಲೀಸ್ ಇಲಾಖೆ ಮತ್ತು ಮಾದಕ ದ್ರವ್ಯ ನಿಷೇಧ ದಳ ಕೂಡಾ ಗಾಂಜಾ ಮಾರಾಟಗಾರರನ್ನು ಮಟ್ಟ ಹಾಕಲು ಸಂಪೂರ್ಣ ವಿಫಲವಾಗಿದೆ.