ವಾರದಲ್ಲಿ ಎರಡು ದಿನ ಪುತ್ತೂರು ಸಂತೆ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಕೊನೆಗೂ ಕಿಲ್ಲೆ ಮೈದಾನಕ್ಕೆ ವಾರದ ಸಂತೆ ಮರುಸ್ಥಳಾಂತರಿಸಲು ಪುತ್ತೂರು ನಗರಸಭೆ ಯಶಸ್ವಿಯಾಗಿದೆ. ಪ್ರತೀ ಭಾನುವಾರ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ವಾರದ ಸಂತೆ ನಡೆಯಲಿದೆ.

ಈ ಹಿಂದೆ ಪ್ರತೀ ಸೋಮವಾರ ಕಿಲ್ಲೆ ಮೈದಾನದಲ್ಲಿ ನಡೆಯುತ್ತಿದ್ದ ಸಂತೆಯನ್ನು ಸಹಾಯಕ ಕಮೀಷನರ್ ಆದೇಶದಂತೆ ಎಪಿಎಂಸಿಯ ಸಂತೆ ಬಜಾರಿಗೆ ಸ್ಥಳಾಂತರವಾಗಿತ್ತು. ಸಂತೆ ಸ್ಥಳಾಂತರಗೊಂಡ ಬಳಿಕ ವಾರದ ಸಂತೆ ಚೆಲ್ಲಾಪಿಲ್ಲಿಯಾಗಿತ್ತು. ಅತ್ತ ಎಪಿಎಂಸಿಯಲ್ಲಿ ಸಂತೆ ನಡೆದರೂ ಅಲ್ಲಿಗೆ ಗ್ರಾಹಕರು ಬರುತ್ತಿರಲಿಲ್ಲ, ಮಧ್ಯದಲ್ಲಿ ರೈಲ್ವೇ ಗೇಟ್ ಅಡ್ಡಿಯಾಗಿತ್ತು. ವಾರದ ಸಂತೆಯನ್ನು ಕಿಲ್ಲೆ ಮೈಧಾನದಲ್ಲೇ ನಡೆಸಬೇಕು ಎಂದು ನಗರಸಭೆಯ ಬಿಜೆಪಿ ಸದಸ್ಯರು ಮತ್ತು ಕೆಲವು ವರ್ತಕರು ಆಗ್ರಹಿಸಿ ಪ್ರತಿಭಟನೆಯನ್ನೂ ಮಾಡಿದ್ದರು. ಆದರೆ ಯಾವುದನ್ನೂ ಕ್ಯಾರೇ ಮಾಡದ ಅಂದಿನ ಏ ಸಿ ಅವರು ಕಿಲ್ಲೆ ಮೈದಾನದಲ್ಲಿ ಯಾವುದೇ ಕಾರಣಕ್ಕೂ ಸಂತೆ ವ್ಯಾಪಾರಕ್ಕೆ ಅವಕಾಶವೇ ನೀಡುವುದಿಲ್ಲ ಎಂದು ಹೇಳಿದ್ದರು.

ಏಸಿ ಹೇಳಿಕೆ ಕಾರಣ ಹೋರಾಟದಲ್ಲೂ ಹಿನ್ನಡೆಯಾಗಿತ್ತು. ಎಪಿಎಂಸಿಗೆ ಬದಲಾಗಿ ನಗರದ ಬೇರೆ ಸ್ಥಳದಲ್ಲಿ ಸಂತೆ ನಡೆಸಿ ಸಾರ್ವಜನಿಕರಿಗೆ ಪ್ರಯೋಜನವಾಗಲೆಂದು ನಗರಸಭಾ ಆಡಳಿತ ನಡೆಸಿದ ಪ್ರಯತ್ನವೆಲ್ಲವೂ ವಿಫಲವಾಗಿತ್ತು. ಹೇಗಾದರೂ ಮಾಡಿ ಕಿಲ್ಲೆ ಮೈದಾನದಲ್ಲೇ ಸಂತೆ ನಡೆಸಬೇಕು ಎಂದು ಹಠಕ್ಕೆ ಬಿದ್ದ ನಗರಸಭೆ ಆಡಳಿತ ಕೊನೆಗೂ ತನ್ನ ಕಾರ್ಯದಲ್ಲಿ ಯಶಸ್ವಿಯಾಗಿದೆ.

ಆದೇಶ ನೀಡಿದ್ದ ಏ ಸಿ ಅವರು ವರ್ಗಾವಣೆ ಬಳಿಕ ನೂತನ ಏಸಿಯವರು ಹಿಂದಿನ ಏಸಿಯವರ ಆದೇಶದಲ್ಲಿ ಕೊಂಚ ಬದಲಾವಣೆಯನ್ನು ತಂದಿದ್ದಾರೆ. ಇದು ನಗರಸಭೆ ಆಡಳಿತಕ್ಕೆ ವರಧಾನವಾಗಿ ಪರಿಣಮಿಸಿತು. ಡಿ 25ರಿಂದ ಪ್ರತೀ ಭಾನುವಾರ ವಾರದ ಸಂತೆ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ, ಸೋಮವಾರದ ಸಂತೆ ಎಂದಿನಂತೆ ಎಪಿಎಂಸಿಯಲ್ಲೇ ನಡೆಯುತ್ತದೆ. ಆದರೆ ಸೋಮವಾರದ ಸಂತೆಯನ್ನೂ ಕಿಲ್ಲೆ ಮೈದಾನದಲ್ಲೇ ನಡೆಸಬೇಕು ಎಂದು ಬಿಜೆಪಿಗರು ಆಗ್ರಹ ಮಾಡುತ್ತಿದ್ದಾರೆ. ಆದರೆ ಜನದಟ್ಟಣೆ ಮತ್ತು ಸರಕಾರಿ ಕಚೇರಿ ಬಳಿ ವಾರದ ಸಂತೆ ನಡೆಸಿದರೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ ಎಂದು ಎ ಸಿಯವರು ಕಿಲ್ಲೆ ಮೈದಾನದಲ್ಲಿ ಸೋಮವಾರ ಸಂತೆ ನಡೆಸದಂತೆ ಪ್ರತಿಭಂದಕಾಜ್ಞೆ ವಿಧಿಸಿದ್ದಾರೆ.

ಕಿಲ್ಲೆ ಮೈದಾನಕ್ಕೆ ಸಂತೆ ಸ್ಥಳಾಂತರವಾದ ಕುರಿತು ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಕಿಲ್ಲೆ ಮೈದಾನದಲ್ಲಿ ಸಂತೆ ನಡೆಸಿಯೇ ಸಿದ್ದ ಎಂದು ಹೇಳಿಕೆ ನೀಡಿದ್ದ ನಗರಸಭೆ ಆಡಳಿತಕ್ಕೆ ಕೊನೆಗೂ ಜಯ ಸಿಕ್ಕಿರುವುದು ಅಚ್ಚರಿಯ ಸಂಗತಿಯಾಗಿದೆ.