ಪುತ್ತೂರು ಬಾಲವನದ ಮಲ್ಟಿಜಿಮ್ ಉದ್ಘಾಟನೆಗೆ ಇನ್ನೂ ಬಂದಿಲ್ಲ ಭಾಗ್ಯ

ಪುತ್ತೂರು : ಇಲ್ಲಿನ ಶಿವರಾಮ ಕಾರಂತರ ಬಾಲವನವನ್ನು ಕಲಾಸಕ್ತರಿಗೆ ಪರಿಚಯಿಸುವ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರಲಾಯಿತು. ಈಜುಕೊಳ, ಗ್ರಂಥಾಲಯ, ಕಲಾ ಗ್ಯಾಲರಿ, ಹೊರಾಂಗಣ ಸಭಾಂಗಣ ಹೀಗೆ ಎಲ್ಲವೂ ಇಲ್ಲಿದೆ. ಕಳೆದ ಒಂದು ವರ್ಷದ ಹಿಂದೆ ಕ್ರೀಡಾಸಕ್ತರ ಒತ್ತಾಯದ ಮೇಲೆ ಬಾಲವನದಲ್ಲಿ ವ್ಯಾಯಾಮ ಶಾಲೆಯ (ಮಲ್ಟಿಜಿಮ್) ಯೋಜನೆ ರೂಪಿಸಲಾಯಿತು. ಇದಕ್ಕೊಸ್ಕರ 10 ಲಕ್ಷ ರೂಪಾಯಿಗಳ ವ್ಯಾಯಾಮ ಕ್ರೀಡಾ ಸಾಮಗ್ರಿಗಳೂ ಬಂದವು. ಒಂದು ವರ್ಷವಾದರೂ ವ್ಯಾಯಾಮ ಶಾಲೆ ಮಾತ್ರ ಸಾರ್ವಜನಿಕರಿಗೆ ಲಭ್ಯವಾಗಿಲ್ಲ. ಇದೀಗ ಜನರ ತೆರಿಗೆ ಹಣದಲ್ಲಿ ಖರೀದಿಸಿದ ರೂ 10 ಲಕ್ಷದ ಸಾಮಗ್ರಿಗಳು ಬಳಕೆಯಾಗದೆ, ಜನತೆಗೆ ಲಭ್ಯವಾಗದೇ ಧೂಳು, ತುಕ್ಕು ಹಿಡಿಯುತ್ತಿವೆ.

ಆರ್ಥಿಕವಾಗಿ ಶಕ್ತಿ ಇಲ್ಲದ ಬಡ ಕ್ರೀಡಾಪಟುಗಳು ಖಾಸಗಿ ಜಿಮ್ಮುಗಳಲ್ಲಿ ದುಪ್ಪಟ್ಟು ಹಣಕೊಟ್ಟು ವ್ಯಾಯಾಮ ಮಾಡುವ ಬದಲು ಸರಕಾರವೇ ಇಂಥಹ ಜಿಮ್ ನಿರ್ವಹಿಸುವುದರಿಂದ ಕ್ರೀಡಾಪಟುಗಳಿಗೆ ಉಪಯೋಗಿಯಾಗುತ್ತದೆ ಎನ್ನುವ ಭರವಸೆಗೆ ತಣ್ಣೀರು ಎರಚಲಾಗಿದೆ.

ಮಾಜಿ ಕ್ರೀಡಾ ಮತ್ತು ಯುವಜನ ಸೇವಾ ಸಚಿವ ಅಭಯಚಂದ್ರ ಜೈನ್ ಬಾಲವನದ ಜಿಮ್ಮಿಗೆ ಚಾಲನೆಯನ್ನೂ ನೀಡಿದ್ದರು. ಜಿಮ್ ಅನ್ನು ಬಾಲವನದ ಈಜುಕೊಳದತ್ತ ಸ್ಥಳಾಂತರಿಸಬೇಕು ಎನ್ನುವ ಒತ್ತಾಯವೂ ಕೇಳಿಬರುತ್ತಿದೆ. ಜಿಮ್ಮಿಗಾಗಿ ತಂದ ಸಾಮಗ್ರಿಗಳನ್ನು ಸಾಗಿಸುವುದಾದರೂ ಎಲ್ಲಿಗೆ ಅನ್ನುವ ಪ್ರಶ್ನೆ ಕಾಡುತ್ತಿದೆ.

`ಕೂಸು ಹುಟ್ಟುವ ಮುನ್ನ ಕುಲಾವಿ ಎಂಬಂತಾಗಿದೆ ಬಾಲವನದ ಜಿಮ್ ಸ್ಥಿತಿ. ಜೈನ್ ಕ್ರೀಡಾ ಸಚಿವರಾಗಿದ್ದ ಕಾಲದಲ್ಲಿ ಕೊಂಚ ಆಸಕ್ತಿ ತೋರಿಸಿದ್ದರು. ಆದರೆ ಇದೀಗ ಅವರಿಗೂ ಇದು ಬೇಡವಾಗಿದೆ. ಶಾಸಕಿ ಶಕುಂತಲಾ ಶೆಟ್ಟಿ ಮನಸ್ಸು ಮಾಡಿದರೆ ಇದನ್ನು ಶೀಘ್ರವೇ ಪ್ರಾರಂಭಿಸಬಹುದು’ ಎನ್ನುತ್ತಾರೆ ಕ್ರೀಡಾ ಪಟು ಹರೀಶ್.