ಉಡುಪಿ ರಸ್ತೆಗಳಿಂದ ತಳ್ಳುಗಾಡಿಗಳ ತೆರವು

ನಮ್ಮ ಪ್ರತಿನಿಧಿ ವರದಿ

ಉಡುಪಿ : ನಗರದಲ್ಲಿ ವಾಹನ ಹಾಗೂ ಪಾದಚಾರಿಗಳ ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲಿ ತಳ್ಳುಗಾಡಿ ಹಾಗೂ ಬೀದಿ ವ್ಯಾಪಾರ ನಿಷೇಧಿಸಿ ಉಡುಪಿ ನಗರಸಭೆಯು ಆದೇಶ ಹೊರಡಿಸಿ, ನಗರದ ಆಯಾ ಕಟ್ಟಿನಲ್ಲಿ ನಾಮಫಲಕ ಆಳವಡಿಸಿದ್ದರೂ, ಇದನ್ನು ಧಿಕ್ಕರಿಸಿ ತಳ್ಳುಗಾಡಿಗಳ ವ್ಯಾಪಾರ ನಿರಾತಂಕವಾಗಿ ನಡೆಯುತ್ತಿರುವುದನ್ನು ಕಂಡು ಉಡುಪಿ ನಗರಸಭಾ ಅಧಿಕಾರಿಗಳು ಹಾಗೂ ಆಡಳಿತಾರೂಢ ನಗರಸಭಾ ಜನಪ್ರತಿನಿಧಿಗಳು ಪೊಲೀಸರನ್ನು ಬಳಸಿಕೊಂಡು ಬುಧವಾರ ನಗರದ ಸರ್ವಿಸ್ ಬಸ್ ಮತ್ತು ಸಿಟಿ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸರ್ವಿಸ್ ಬಸ್ ನಿಲ್ದಾಣ ಬಳಿಯ ಸಾರ್ವಜನಿಕ ಶೌಚಾಲಯ ಹಿಂಬದಿ ರಸ್ತೆಯಲ್ಲಿ ತಳ್ಳುಗಾಡಿ ಮತ್ತು ಬೀದಿ ವ್ಯಾಪಾರ ಮಾಡುತ್ತಿದ್ದವರ ಸಾಮಗ್ರಿ ಮತ್ತು ಸರಾಂಜಾಮುಗಳನ್ನು ನಗರಸಭಾ ವಾಹನದಲ್ಲಿ ಎತ್ತಾಕಿಕೊಂಡು ಹೋದರು.

ಈ ಸಂದರ್ಭದಲ್ಲಿ ಬೀದಿ ವ್ಯಾಪಾರಸ್ಥರ ಸಂಘದ ಮುಖಂಡರು(ಸಿಐಟಿಯು) ಹಾಗೂ ನಗರಸಭಾ ಜನಪ್ರತಿನಿಧಿಗಳ ಮಧ್ಯೆ  ವಾಗ್ವಾದ ನಡೆದಿದ್ದು, ಕೆಲ ಹೊತ್ತು ಟ್ರಾಫಿಕ್ ಜಾಮ್ ಆಗಿದೆ. ತಳ್ಳುಗಾಡಿ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ನಗರದ ಹೊರವಲಯದಲ್ಲಿ ವ್ಯಾಪಾರ ಮಾಡುವಂತೆ ಪ್ರತ್ಯೇಕ ವಲಯಗಳನ್ನು ಗುರಿತಿಸಿ ನೀಡಲಾಗಿದೆ ಎಂದು ನಗರಸಭಾ ಆಯುಕ್ತ ಮಂಜುನಾಥಯ್ಯ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘ(ಸಿಐಟಿಯು) ಮುಖಂಡ ಕವಿರಾಜ್, “ಜನವಸತಿ ಪ್ರದೇಶ ಇಲ್ಲದ ಕಡೆ ಬೀದಿ ವ್ಯಾಪಾರಿಗಳಿಗೆ ವ್ಯಾಪಾರ ನಡೆಸುವಂತೆ ವಲಯಗಳನ್ನು ಗುರುತಿಸಲಾಗಿದೆ. ಅಲ್ಲಿ ವ್ಯಾಪಾರ ಆಗುತ್ತಿಲ್ಲ. ಹಾಗಾಗಿ ಮಂಗಳೂರು ಮಾದರಿಯಂತೆ ಉಡುಪಿ ನಗರದೊಳಗೆಯೇ ಬೀದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಬೀದಿ ಬದಿ ವ್ಯಾಪಾರಿಗಳ ವಲಯವನ್ನು ಕೂಡಲೇ ಉಡುಪಿ ನಗರಸಭೆ ಗುರುತಿಸಬೇಕು” ಎಂದು ಆಗ್ರಹಿಸಿದ್ದಾರೆ.