ಪುಣೆ ವಾರ್ಸಿಟಿ ಸಸ್ಯಾಹಾರಿ, ಮದ್ಯವರ್ಜಿತ ವಿದ್ಯಾರ್ಥಿಗಳಿಗೆ ಮಾತ್ರ ಚಿನ್ನದ ಪದಕ

ಪುಣೆ : ಶೈಕ್ಷಣಿಕ ಉನ್ನತಿ ಸಾಧಿಸಿದವರಿಗೆ ಚಿನ್ನದ ಪದಕ ದೊರೆಯುವುದು ವಿಶೇಷ ಸಂಗತಿಯೇನಲ್ಲ. ಆದರೆ ಚಿನ್ನದ ಪದಕ ಪಡೆಯಬೇಕಾದರೆ ಶೈಕ್ಷಣಿಕ ಉನ್ನತಿಯೊಂದಿಗೆ ವಿದ್ಯಾರ್ಥಿಳು ಸಸ್ಯಾಹಾರಿಗಳಾಗಿರಬೇಕು, ಮದ್ಯ ಸೇವಿಸದವರಾಗಿರಬೇಕೆಂಬ ನಿಯಮಗಳು ಬಂದರೆ ವಿದ್ಯಾರ್ಥಿಗಳಿಗೆ ಹೇಗಾಗಬೇಡ ಹೇಳಿ ? ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯನ್ನು ಇಲ್ಲಿನ ಪ್ರತಿಷ್ಠಿತ ಸಾವಿತ್ರಿಬಾಯಿ ಫುಳೆ ಪುಣೆ ವಿಶ್ವವಿದ್ಯಾಲಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೊಡ್ಡಿದೆ. ವಿಶ್ವವಿದ್ಯಾಲಯದ ಘಟಿಕೋತ್ಸವದ ವೇಳೆಗೆ ಯೋಗ ಟ್ರಸ್ಟ್ ಒಂದು ನೀಡಲಿರುವ ಚಿನ್ನದ ಪದಕಗಳನ್ನು ಪಡೆಯಲು ಮೇಲಿನ ಷರತ್ತುಗಳು ಸಹಿತ ಇತರ ಹಲವು ನಿಯಮಗಳನ್ನು ಪಟ್ಟಿ ಮಾಡಲಾಗಿದೆ.

ತನ್ನ ಅಧೀನದಲ್ಲಿ ಬರುವ ಎಲ್ಲಾ ಕಾಲೇಜುಗಳು ಹಾಗೂ ಇಲಾಖೆಗಳಿಗೆ ವಿ ವಿ ಸುತ್ತೋಲೆಯೊಂದನ್ನು ಹೊರಡಿಸಿ ವಿಜ್ಞಾನೇತರ ವಿಷಯಗಳಲ್ಲಿ ಅಧ್ಯಯನ ನಡೆಸುತ್ತಿರುವ ಸ್ನಾತ್ತಕೋತ್ತರ ವಿದ್ಯಾರ್ಥಿಗಳ ಪೈಕಿ 2016-17 ಶೈಕ್ಷಣಿಕ ವರ್ಷದ ಸಾಧಕರಿಗೆ ಯೋಗ ಮಹರ್ಷಿ ರಾಮಚಂದ್ರ ಗೋಪಾಲ್ ಆಚಾರ್ ಆಲಿಯಾಸ್ ಶೆಲರ್ ಮಾಮಾ ಎಂಬವರ ಹೆಸರಿನಲ್ಲಿ ಚಿನ್ನದ ಪದಕ ನೀಡಲಾಗುವುದು ಎಂದು ಹೇಳಲಾಗಿದೆ. ಅರ್ಹತಾ ಪಟ್ಟಿಯಲ್ಲಿ ಏಳನೇ ಕ್ರಮಾಂಕದಲ್ಲಿ ವಿದ್ಯಾರ್ಥಿ “ಸಸ್ಯಾಹಾರಿಯಾಗಿರಬೇಕು, ಮದ್ಯ ಸೇವಿಸುವವನಾಗಿರಬಾರದು” ಎಂದು ಹೇಳಿದೆ. ಇತರ ಅರ್ಹತೆಗಳೆಂದರೆ ಅವರು ಭಾರತೀಯ ಸಂಸ್ಕøತಿ, ಪದ್ಧತಿಗಳ ಮೇಲೆ ನಂಬಿಕೆಯುಳ್ಳವರಾಗಿರಬೇಕು, ನೃತ್ಯ, ಹಾಡುಗಾರಿಕೆ ಹಾಗೂ ರಂಗಭೂಮಿಯಲ್ಲಿ ಆಸಕ್ತಿಯುಳ್ಳವರಾಗಿರಬೇಕು ಹಾಗೂ ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಮಾಡುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದೆಂದು ವಿವರಿಸಲಾಗಿದೆ.

ವಿ ವಿ.ಯ ಈ ಸುತ್ತೋಲೆ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆಯಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಆಸಕ್ತಿದಾಯಕ ಚರ್ಚೆಯನ್ನೂ ಹುಟ್ಟು ಹಾಕಿದೆ. ಈ ಕುರಿತು ರಿಜಿಸ್ಟ್ರಾರ್ ಅರವಿಂದ್ ಶಾಲಿಗ್ರಾಮ್ ಸ್ಪಷ್ಟೀಕರಣ ನೀಡುತ್ತಾ “ಸುತ್ತೋಲೆಯಲ್ಲಿರುವ ವಿಚಾರ ಹಳೆಯದಾಗಿದ್ದು, ಶೆಲರ್ ಮಾಮ ಎಂಬವರ ಹೆಸರಿನಲ್ಲಿ ಚಿನ್ನದ ಪದಕ ನೀಡುವ ಸಂಪ್ರದಾಯ 2006ರಲ್ಲಿ ಆರಂಭಿಸಲಾಗಿತ್ತು” ಎಂದು ಹೇಳಿದ್ದಾರೆ.

ಯುವ ಸೇನಾ ನಾಯಕ ಆದಿತ್ಯ ಠಾಕ್ರೆ ಟ್ವೀಟ್ ಮಾಡಿ “ಇದೇನು ವಿಶ್ವವಿದ್ಯಾಲಯವೇ ಇಲ್ಲ ರೆಸ್ಟಾರೆಂಟ್ ಆಗಿದೆಯೇ ?” ಎಂದು ಪ್ರಶ್ನಿಸಿ ಸುತ್ತೋಲೆಯನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದ್ದಾರೆ.