ದಿಡ್ಡಹಳ್ಳಿ ಸರಕಾರಕ್ಕೆ ಪಿಯುಸಿಎಲ್ ಮನವಿ

ಕೊಡಗು ಜಿಲ್ಲೆಯ ದಿಡ್ಡಹಳ್ಳಿಯಲ್ಲಿ ಕಳೆದೆರೆಡು ತಿಂಗಳುಗಳಿಂದ ಆದಿವಾಸಿಗಳು ವಸತಿ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದು, ಅದು ಪರಿಹಾರ ಕಂಡಿತು ಎಂಬ ಆಶಾ ಭಾವನೆ ಉಂಟಾಗಿತ್ತು. ಕರ್ನಾಟಕ ಸರ್ಕಾರ ಒಂದು ಕೋಟಿ ಹಣದ ತಾತ್ಕಾಲಿಕ ಪರಿಹಾರ ಮತ್ತು ವಸತಿಗಾಗಿ ಭೂಮಿಯನ್ನು ಗುರುತಿಸಲು ಜಿಲ್ಲಾ ಆಡಳಿತಕ್ಕೆ ಹೇಳಿತ್ತು.
ಆದರೆ ಇಲ್ಲಿಯವರೆಗೆ ಶಾಶ್ವತ ಪರಿಹಾರದ ಬಗ್ಗೆ ಸರ್ಕಾರ ಚಕಾರ ಎತ್ತಿಲ್ಲ ಎಂದು ಆದಿವಾಸಿಗಳು ದೂರುತ್ತಾ ಇದ್ದಾರೆ. ಆದಿವಾಸಿಗಳ ಸಭೆಯನ್ನು ಕರೆದಿಲ್ಲ. ಈಗ ಜಿಲ್ಲಾಡಳಿತ ಏಕಾಏಕಿ ನಿರಾಶ್ರಿತರನ್ನು ಒಕ್ಕೆಲೆಬ್ಬಿಸುವ ಹುನ್ನಾರದಲ್ಲಿ ಲಾಟರಿ ಮೂಲಕ ನಿವೇಶನ ಹಂಚಲು ಮುಂದಾಗಿರುವುದನ್ನು ಆದಿವಾಸಿಗಳು ಪ್ರತಿಭಟಿಸುತ್ತಿದ್ದಾರೆ.
ಸೋಮವಾರ 144 ಸೆಕ್ಷನ್ ಜಾರಿಗೊಳಿಸಿ, ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ, ಎ ಕೆ ಸುಬ್ಬಯ್ಯ ಅವರ ನೇತೃತ್ವದ ಹೋರಾಟಗಾರರನ್ನು ಪ್ರತಿಬಂಧಿಸಿರುವುದನ್ನು ಪಿಯುಸಿಎಲ್ ಖಂಡಿಸುತ್ತದೆ. ಶಾಂತಿಯುತ ಪ್ರತಿಭಟನೆ ಸಂವಿಧಾನದತ್ತ ಹಕ್ಕು. ಅದಕ್ಕೆ ಭಂಗ ತಂದಿರುವ ಜಿಲ್ಲಾಡಳಿತ ಇಂತಹ ಕ್ರಮ ಕೈಗೊಳ್ಳಲು ಮುಂದಾಗಬಾರದೆಂದು ಒತ್ತಾಯಿಸುತ್ತದೆ.
ಸರ್ಕಾರ ಆದಿವಾಸಿಗಳ ವಸತಿಯ ಹಕ್ಕುಗಳನ್ನು ರಕ್ಷಿಸುವ ಜತೆಗೆ ಇಡೀ ಕೊಡಗು ಜಿಲ್ಲೆಯಲ್ಲಿ ಎಸ್ಟೇಟುಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಅಮಾನವೀಯ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಒಂದು ಆಯೋಗವನ್ನು ಕರ್ನಾಟಕ ಸರ್ಕಾರ ರಚಿಸಬೇಕೆಂದು ಪಿಯುಸಿಎಲ್ ಒತ್ತಾಯಿಸುತ್ತದೆ

  • ಟಿ ಇ ರತಿ ರಾವ್ (ಅಧ್ಯಕ್ಷರು), ಮರಿದಂಡಯ್ಯ ಬುದ್ಧ (ಕಾರ್ಯದರ್ಶಿ)
    ಪಿಯುಸಿಎಲ್  ಮೈಸೂರು