ಮೂಡುಬಿದಿರೆ ಸಾರ್ವಜನಿಕ ಶೌಚಾಲಯಕ್ಕೆ ಸಿಬ್ಬಂದಿ ಬೀಗ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಇಲ್ಲಿನ ಪುರಸಭೆ ಮಾರುಕಟ್ಟೆಯಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ನಾಲ್ಕು ದಿನಗಳಿಂದ ಬೀಗ ಬಿದ್ದಿದ್ದು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಗ್ರಾಹಕರು, ವ್ಯಾಪಾರಿಗಳು ಅಲ್ಲದೆ ಸಾರ್ವಜನಿಕರು ಮೂತ್ರಶಂಕೆಗೆ ಮಾರುಕಟ್ಟೆಯ ಸುಲಭ ಶೌಚಾಲಯವನ್ನು ಅವಲಂಬಿಸಿದ್ದಾರೆ. ಶುಕ್ರವಾರದಿಂದ ಇಲ್ಲಿನ ಸಿಬ್ಬಂದಿ ಶೌಚಾಲಯಕ್ಕೆ ಬೀಗ ಹಾಕಿ ತೆರಳಿದ್ದಾರೆ. ಕಾರಣ ಹುಡುಕಿದಾಗ ಶೌಚಾಲಯಕ್ಕೆ ನೀರು ಪೂರೈಕೆ ಸ್ಥಗಿತಗೊಂಡಿದ್ದು, ಪುರಸಭೆಗೆ ದೂರು ಕೊಟ್ಟರೂ ಅಧಿಕಾರಿಗಳು ಸ್ಪಂದಿಸಿಲ್ಲ ಎನ್ನಲಾಗಿದೆ.

ಶೌಚಾಲಯಕ್ಕೆ ಬೀಗ ಬಿದ್ದುದರಿಂದ ಕೆಲವರು ಶೌಚಾಲಯದ ಹೊರಗಡೆಯೆ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಪರಿಸರದಲ್ಲಿ ಅಸಹ್ಯ ವಾತಾವರಣ ಸೃಷ್ಟಿಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪುರಸಭೆ ಇಲ್ಲಿನ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕೆಂಬ ಆಗ್ರಹ ಕೇಳಿಬಂದಿದೆ.