ಭಟ್ಕಳದಲ್ಲಿ ಅಣಬೆ ಮಾರಾಟಕ್ಕೆ ಅರಣ್ಯ ಅಧಿಕಾರಿಗಳಿಂದ ನಿರ್ಬಂಧ : ಆಕ್ರೋಶ

ನಮ್ಮ ಪ್ರತಿನಿಧಿ ವರದಿ

ಭಟ್ಕಳ : ಪಟ್ಟಣದ ಸಂಶುದ್ದೀನ ವೃತ್ತ, ತಹಶೀಲ್ದಾರ ಕಚೇರಿ ಎದುರಿನ ಮುಖ್ಯರಸ್ತೆಯ ಬದಿಯಲ್ಲಿ ಸೋಮವಾರ ಅಣಬೆ ಮಾರಾಟಕ್ಕೆ ಅರಣ್ಯ ಇಲಾಖೆಯವರು ಆಕ್ಷೇಪ ವ್ಯಕ್ತಪಡಿಸಿ ಅಣಬೆಯನ್ನು ವಶಪ ಡಿಸಿಕೊಂಡು ಹೋಗಿದ್ದರಿಂದ ಕೆಲಕಾಲ ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು.

ಕಾಡಿನಲ್ಲಿ ಸಿಗುವ ಅಣಬೆ ಕಿತ್ತು ತಂದು ಮಾರಾಟ ಮಾಡುವುದು ಕಾನೂನುಬಾಹಿರ ಎನ್ನುವುದು ಅರಣ್ಯ ಇಲಾಖೆಯವರ ವಾದವಾಗಿದೆ. ಹೀಗಾಗಿ ಸೋಮವಾರ ದಿಢೀರ್ ದಾಳಿ ನಡೆಸಿದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾರಾಟಕ್ಕೆಂದು ರಾಶಿ ರಾಶಿ ಹಾಕಲಾಗಿದ್ದ ಅಣಬೆಯನ್ನು ವಶಪಡಿಸಿಕೊಂಡಿದ್ದಲ್ಲದೇ ಅದನ್ನು ಮಾರಾಟಕ್ಕೆ ತಂದವರನ್ನು ಅರಣ್ಯ ಕಚೇರಿಗೆ ಬರುವಂತೆ ಹೇಳಿದ್ದರು. ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ಬಂದು ಮಾರಾಟಕ್ಕಿಟ್ಟಿದ್ದ ಅಣಬೆಗಳನ್ನು ವಶಪಡಿಸಿಕೊಂಡು ಹೋದ ಬಗ್ಗೆ ಮಾರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಚೇರಿ ಎದುರುಗಡೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಅಣಬೆ ಮಾರಾಟಗಾರರ ಮಧ್ಯೆ ವಾಕ್ಸಮರವೂ ನಡೆಯಿತು.

“ಹೊಟ್ಟೆಪಾಡಿಗಾಗಿ ನಾವು ಅಣಬೆ ಮಾರಾಟ ಮಾಡುತ್ತಿದ್ದು, ಈಗ ಮಾರಾಟ ಮಾಡಬಾರದು ಎಂದು ನಿರ್ಬಂಧ ಹೇರಿದರೆ ಹೇಗೆ ?, ಇಷ್ಟು ವರ್ಷ ಇಲ್ಲದ ನಿರ್ಬಂಧ ಈಗೇಕೆ ಬಂತು ?” ಎಂದು ಅಣಬೆ ಮಾರಾಟಗಾರರು ಅಧಿಕಾರಿಗಳನ್ನು ಪ್ರಶ್ನಿಸಿದರು. “`ಅಣಬೆ ಕಾಡಿನ ಉತ್ಪನ್ನವಾಗಿದ್ದು, ಅದನ್ನು ಮಾರಾಟ ಮಾಡುವುದು ಸರಿಯಲ್ಲ” ಎನ್ನುವುದು ಅರಣ್ಯ ಇಲಾಖೆಯವರ ವಾದವಾಗಿದೆ.

“ನಾವು ಕಳೆದ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಅಣಬೆ ಮಾರಾಟ ಮಾಡುತ್ತಿದ್ದೇವೆ. ಇದರಿಂದ ಸ್ವಲ್ಪಮಟ್ಟಿನ ಆದಾಯವೂ ಬರುತ್ತಿದ್ದು, ಜೀವನ ನಿರ್ವಹಣೆಗೆ ಅನುಕೂಲವಾಗಿದೆ. ಆದರೆ ಅರಣ್ಯ ಅಧಿಕಾರಿಗಳು ಮಾರಾಟ ಮಾಡದಂತೆ ತಡೆಯುವುದು ಸರಿಯಲ್ಲ” ಎಂದು ಮಾರಾಟಗಾರರು ತಿಳಿಸಿದ್ದಾರೆ. ಸೋಮವಾರ ಅರಣ್ಯ ಅಧಿಕಾರಿಗಳ ದಿಢೀರ್ ಕಾರ್ಯಾಚರಣೆ ನಡೆದಿದ್ದರಿಂದ ಅಣಬೆ ಮಾರಾಟಗಾರರು ಹಾಗೂ ಕೊಳ್ಳುವವರಿಗೂ ತೊಂದರೆ ಉಂಟಾಯಿತು. ಸೋಮವಾರ 50,000ಕ್ಕೂ ಅಧಿಕ ಅಣಬೆಗಳು ಮಾರಾಟಕ್ಕೆಂದು ಪಟ್ಟಣಕ್ಕೆ ಬಂದಿತ್ತು.