40 ಬೀದಿ ನಾಯಿ ಸಾಕುತ್ತಿರುವ ವ್ಯಕ್ತಿ ವಿರುದ್ಧ ಸಿಡಿದೆದ್ದ ಜನರು

ಕಣ್ಣೂರು : ಇಲ್ಲಿನ ಮುನಿಸಿಪಲ್ ವ್ಯಾಪ್ತಿ ಪ್ರದೇಶದಲ್ಲಿರುವ 68 ಸೆಂಟ್ಸ್  ಭೂಮಿಯೊಂದರ ಮಾಲಕ ತನ್ನ ಮನೆಯಲ್ಲಿ ಸುಮಾರು 40  ಬೀದಿ ನಾಯಿಗಳನ್ನು ಸಾಕುವುದರ ವಿರುದ್ದ  ಜನರು ಸಿಡಿದೆದ್ದಿದ್ದಾರೆ. 48 ವರ್ಷದ ರಾಜೀವ್ ಕೃಷ್ಣನ್ ಕಳೆದ ಹಲವಾರು ವರ್ಷಗಳಿಂದ ಅನಾಥ, ಗಾಯಗೊಂಡಿರುವ ಬೀದಿ ನಾಯಿಗಳನ್ನು ತಮ್ಮ ಮನೆಗೆ ತಂದು ಅವುಗಳನ್ನು ಪ್ರೀತಿಯಿಂದ ಸಲಹುತ್ತಿದ್ದಾರೆ. ಹೆತ್ತವರನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡಿರುವ ರಾಜೀವ್ ಅವರ ಪಾಲಿಗೆ ತನ್ನವರೆಂದು ಯಾರೂ ಇಲ್ಲ. ಈ ನಾಯಿಗಳನ್ನೇ ಅವರು ಮಕ್ಕಳಂತೆ ಪ್ರೀತಿಯಿಂದ ಸಲಹುತ್ತಿದ್ದಾರೆ.

ಆದರೆ ಇತ್ತೀಚೆಗೆ ಬೀದಿ ನಾಯಿಗಳು ಹಲವರ ಮೇಲೆ ದಾಳಿ ನಡೆದ ಪ್ರಸಂಗಗಳು ವರದಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ರಾಜೀವ್ ಅವರ ಅಸುಪಾಸಿನ ಮನೆಗಳ ನಿವಾಸಿಗಳು ಅವರ ಮನೆಯೆದರು ಧರಣಿ ನಡೆಸಿ  ಬೀದಿ ನಾಯಿಗಳನ್ನು ಸಾಕದಂತೆ ಅವರನ್ನು ಒತ್ತಾಯಿಸಿದ್ದಾರೆ.  ಅವರ ಮನೆಯಿಂದ ರಾತ್ರಿ ಹಗಲು ಕೇಳಿ ಬರುತ್ತಿರುವ ನಾಯಿಗಳ ಬೊಗಳುವಿಕೆಯ ಸದ್ದು ತಮಗೆ ಕಿರಿಕಿರಿಯುಂಟು ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಹೇಳಿದರಲ್ಲದೆ ರಾಜೀವ್ ತಮ್ಮ ನಾಯಿಗಳನ್ನು ಬೇರೆಡೆಗೆ ಸಾಗಿಸಬೇಕೆಂಬ ಬೇಡಿಕೆಯನ್ನೂ ಇಟ್ಟಿದ್ದಾರೆ.

ಆದರೆ ತಮ್ಮ ನಾಯಿಗಳನ್ನು ಅತಿಯಾಗಿ ಪ್ರೀತಿಸುವ ರಾಜೀವ್ ಅವುಗಳನ್ನು ಬಿಟ್ಟಿರಲು ಮನಸ್ಸು ಮಾಡುತ್ತಿಲ್ಲ. 1990ರ ಅಸುಪಾಸಿನಲ್ಲಿ ಒಮ್ಮೆ ಗಾಯಗೊಂಡ ಬೀದಿ ನಾಯಿಯೊಂದನ್ನು ಮನೆ ಸಮೀಪ ನೋಡಿದ್ದ ರಾಜೀವ್ ಅದರ ಆರೈಕೆ ಮಾಡಿದ್ದರು. ಇದರ ನಂತರ ಆ ನಾಯಿ ಅವರನ್ನು ಹೋದಲ್ಲೆಲ್ಲಾ ಹಿಂಬಾಲಿಸಲು ಆರಂಭಿಸಿ ಅವರೊಂದಿಗಿಯೇ ಇದ್ದುಬಿಟ್ಟಿತ್ತು. ಅಂದಿನಿಂದ ಅವರು ಬೀದಿ ನಾಯಿಗಳನ್ನು ಸಾಕಲು ಆರಂಭಿಸಿದ್ದರು.  ಇತರರಿಗೆ ತೊಂದರೆಯಾಗದಿರಲೆಂದು ಕೆಲ ಸಮಯದ ಹಿಂದೆ ತಮ್ಮ ಮನೆ ಸುತ್ತ  ತಂತಿ ಬೇಲಿಯನ್ನೂ ಹಾಕಿಸಿದ್ದರು. ಇದೀಗ ಸ್ಥಳೀಯರ ಪ್ರತಿಭsಟನೆಗೆ ತಾವು ಜಗ್ಗುವುದಿಲ್ಲವೆಂದು ಅವರು ಹೇಳಿದ್ದಾರೆ.

(ದಿನ್ಯೂಸ್ಮಿನಿಟ್)