ಕುಡಿಯುವ ನೀರು ಪೋಲಾಗುವ ಸ್ಥಳದಲ್ಲಿ ಗಿಡ ನೆಟ್ಟು ಆಕ್ರೋಶ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಕುಡ್ತಮುಗೇರು ಜಂಕ್ಷನಲ್ಲಿ ಎರಡು ತಿಂಗಳಿಂದ ಕುಡಿಯುವ ನೀರು ಪೋಲಾಗುತ್ತಿದ್ದರೂ ಸ್ಥಳೀಯ ಪಂ ಸದಸ್ಯರು ಎಚ್ಚೆತ್ತುಕೊಳ್ಳದ ಕಾರಣ ಸಾರ್ವಜನಿಕರು ಪಪ್ಪಾಯಿ ಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಳ್ನಾಡು ಗ್ರಾಮದ ಮೂರನೇ ವಾರ್ಡಿನ ಕುಡ್ತಮುಗೇರು ಜಂಕ್ಷನಿನ ರಸ್ತೆ ಬದಿಯಲ್ಲಿ ಹಾದುಹೋಗಿದ್ದ ಕುಡಿಯುವ ನೀರಿನ ಸಂಪರ್ಕದ ಪೈಪು ಎರಡು ತಿಂಗಳ ಹಿಂದೆ ಹುಡಿಯಾಗಿತ್ತು. ದುರಸ್ತಿ ಮಾಡಿಸುವಂತೆ ಆಟೋ ಚಾಲಕರು ಮತ್ತು ಸಾರ್ವಜನಿಕರು ಸ್ಥಳೀಯ ಜವಾಬ್ದಾರಿಯುತ ಪಂ ಸದಸ್ಯರಲ್ಲಿ ಮನವಿ ಮಾಡಿದ್ದರೂ ಈವರೆಗೂ ಸ್ಪಂದಿಸಿಲ್ಲ. ನೀರು ಸರಬರಾಜಾಗುವ ಸಂದರ್ಭ ಪೋಲಾಗುತ್ತಿರುವ ನೀರು ಬಳಿಕ ಅದೇ ಪೈಪಿಗೆ ಇಂಗುತ್ತಿರುವ ಕಾರಣ ಪರಿಸರದಲ್ಲೆಲ್ಲಾ ಮಾರಕ ರೋಗದ ಭೀತಿ ಕಾಡುತ್ತಿದೆ. ಜನಪ್ರತಿನಿಧಿ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಸಾರ್ವಜನಿಕರು ಪಪ್ಪಾಯಿ ಗಿಡ ನೆಟ್ಟು ತಮ್ಮ ಆಕ್ರೋಶ ಹೊರಹಾಕಿದ್ದಾರೆ.