ಕಾಲೇಜು ಹಾಸ್ಟೆಲಲ್ಲಿ ಪಿಯು ವಿದ್ಯಾರ್ಥಿ ನಿಗೂಢ ಸಾವು

ಬೆಂಗಳೂರು : ಬೆಲ್ಲಂದೂರಿನ ಶ್ರೀ ಚೈತನ್ಯ ಪಿಯು ಕಾಲೇಜಿನಲ್ಲಿ ಪಿಯು ತರಗತಿಯಲ್ಲಿದ್ದ ಸಾರ್ಥಕ್ ಪುರಾಣಿಕ್ (17) ಎಂಬ ವಿದ್ಯಾರ್ಥಿಯ ಶವ ಶನಿವಾರ ಸಂಜೆ ಕಾಲೇಜು ಹಾಸ್ಟೆಲಿನ ಶೌಚಾಲಯದಲ್ಲಿ ನಿಗೂಢವಾಗಿ ಪತ್ತೆಯಾಗಿದೆ.

ಧಾರವಾಡ ಮೂಲದ  ಸಾರ್ಥಕ್ ಶನಿವಾರ ಸಂಜೆ 7.30ರಿಂದ 8 ಗಂಟೆಯ ಮಧ್ಯೆ ಮೃತಪಟ್ಟಿದ್ದಾನೆ. ಶೌಚಾಲಯಕ್ಕೆ ಹೋದವ ಕೆಲವು ಹೊತ್ತಾದರೂ ಹಿಂದೆ ಬಂದಿಲ್ಲ. ಆಗ ಶೌಚಾಲಯ ಒಳಗಿನಿಂದ ಲಾಕ್ ಮಾಡಲಾಗಿತ್ತು. ಕೆಲವರು  ಒಳಗೆ ಇಣುಕಿ ನೋಡಿದಾಗ ಸಾರ್ಥಕ್ ಮೂರ್ಛೆ ಹೋಗಿ ಕುಸಿದು ಬಿದ್ದಿರುವುದು ಕಂಡು ಬಂತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಪೊಲೀಸರು ಶೌಚಾಲಯದ ಬಾಗಿಲು ಮುರಿದು ತಕ್ಷಣ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕೊಂಡೊಯ್ದರು. ಆದರೆ ಈತ ಅದಾಗಲೇ ಕೊನೆಯುಸಿರೆಳೆದಿದ್ದ ಎಂದು ವೈದ್ಯರು ಹೇಳಿದ್ದಾರೆ. “ಸಾವಿಗೆ ನಿಜವಾದ ಕಾರಣ ಗೊತ್ತಾಗಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಕಾಯಲಾಗುತ್ತಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಭಾನುವಾರದಂದು ಶವವನ್ನು ಸಾರ್ಥಕ್ ಪಾಲಕರಿಗೆ ಹಸ್ತಾಂತರಿಸಲಾಗಿದೆ. “ಆತ್ಮಹತ್ಯೆ ಮಾಡುವಂತಹ ಬಾಲಕನಲ್ಲ. ಹಾಗಾಗಿ ಸಂಶಯ ಹುಟ್ಟಿಕೊಂಡಿದೆ. ಇದುವರೆಗೂ ಬಾಲಕನ ಪಾಲಕರು ಯಾರ ವಿರುದ್ಧವೂ ಆರೋಪ ಹೊರಿಸಿಲ್ಲ” ಎಂದು ಪೊಲೀಸರು ತಿಳಿಸಿದರು.