`ಬಿಜೆಪಿಯನ್ನು ಪ್ರಶ್ನಿಸಲು ಜನರಿಗೆ ನಾವು ವೇದಿಕೆಯೊದಗಿಸುತ್ತಿದ್ದೇವೆ’

ದಲಿತ ನಾಯಕ ಹಾಗೂ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್ ಸಂಚಾಲಕ ಜಿಗ್ನೇಶ್ ಮೆವಾನಿ ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಪಕ್ಷೇತರರಾಗಿ ಬಾನಸ್ಕಂತ ಜಿಲ್ಲೆಯ ವಡ್ಗಮ್ ಕ್ಷೇತ್ರದಿಂದ ಸ್ಪರ್ಧಾಕಣದಲ್ಲಿದ್ದು ಸೋಮವಾರವಷ್ಟೇ ತಮ್ಮ ರೋಡ್ ಶೋ ಆರಂಭಿಸಿದ್ದಾರೆ. ಈ ಸಂದರ್ಶನದಲ್ಲಿ ಅವರು ಗುಜರಾತ್ ಚುನಾವಣೆಗಾಗಿನ ತಮ್ಮ ತಂತ್ರಗಾರಿಕೆ, ಮುಂದಿನ ಕಾರ್ಯಯೋಜನೆಗಳು ಹಾಗೂ ಉದ್ದೇಶಗಳನ್ನು ವಿವರಿಸಿದ್ದಾರೆ.

  • ಗುಜರಾತ್ ಚುನಾವಣೆಯ ಮೇಲೆ ಹಾರ್ದಿಕ್ ಪಟೇಲ್, ಅಲ್ಪೇಶ್ ಠಾಕುರ್ ಹಾಗೂ ನಿಮ್ಮ ಪ್ರಭಾವ ಎಷ್ಟರ ಮಟ್ಟಿಗಿದೆ ?

ಬಿಜೆಪಿ ಇಲ್ಲಿ ಸೃಷ್ಟಿಸಿರುವ ನಕಲಿ ಅಭಿವೃದ್ಧಿ ಮಾದರಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಅವರಲ್ಲಿ ಆಡಳಿತ ವಿರೋಧಿ ಭಾವನೆಯನ್ನು ಮೂಡಿಸುವುದು ನಮ್ಮ ಉದ್ದೇಶ. ಗುಜರಾತ್ ರಾಜ್ಯವನ್ನು ನಿಜವಾಗಿಯೂ ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸುವ ಪ್ರಯತ್ನ ನಮ್ಮದು. ನಮಗೆ ಜನರಿಂದ, ಮುಖ್ಯವಾಗಿ ಯುವಕರಿಂದ ದೊರೆಯುತ್ತಿರುವ ಪ್ರತಿಕ್ರಿಯೆ ಅಭೂತಪೂರ್ವವಾಗಿದೆ. ನಾವು ಮೂವರು ಜತೆಯಾಗಿ ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆಯನ್ನು ಮೂಡಿಸುವಲ್ಲಿ ಸಫಲರಾಗಿದ್ದೇವೆ. ಹಲವು ಸಮಯದಿಂದ ಬಿಜೆಪಿಯನ್ನು ಪ್ರಶ್ನಿಸಲು ಜನರಿಗೆ ಮರೆತೇ ಹೋಗಿತ್ತು. ಈಗ ನಾವು ಅವರಿಗೊಂದು ವೇದಿಕೆಯೊದಗಿಸುತ್ತಿದ್ದೇವೆ. ನಮ್ಮ ಆಂದೋಲನ ಮುಂದಿನ ದಿನಗಳಲ್ಲಿ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ.

  • ಇದು ಕಾಂಗ್ರೆಸ್ ಪಕ್ಷಕ್ಕೂ ಪ್ರಯೋಜನಕಾರಿಯಲ್ಲವೇ ?

ಖಂಡಿತವಾಗಿಯೂ. ಇದು ನನ್ನ ಸ್ಪಷ್ಟ ಅಭಿಪ್ರಾಯ. ನಮ್ಮಿಂದಾಗಿ ಕಾಂಗ್ರೆಸ್ ಪಕ್ಷ ವಿವಿಧ ರೀತಿಯಲ್ಲಿ ಲಾಭ ಪಡೆಯುತ್ತಿದೆ.

  • ಆದರೆ ಬಿಜೆಪಿ ಗೆದ್ದರೆ ಏನಾಗಬಹುದು ?

ಬಿಜೆಪಿ ವಿರುದ್ಧದ ನನ್ನ ಹೋರಾಟ ಮುಂದುವರಿಯುವುದು. ಒಂದು ವೇಳೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ನಾನೀಗ ಹೋರಾಡುತ್ತಿರುವ ವಿಚಾರಗಳ ಬಗ್ಗೆ ಏನೂ ಕ್ರಮ ಕೈಗೊಳ್ಳದೇ ಇದ್ದರೆ, ಅವರ ವಿರುದ್ಧವೂ ಹೋರಾಡುತ್ತೇನೆ. ತುಳಿತಕ್ಕೊಳಗಾದ ಸಮುದಾಯಗಳ ಸಮಸ್ಯೆಗಳನ್ನು ಪರಿಹರಿಸಲೇಬೇಕು. 2019ರ ಚುನಾವಣೆಗಾಗಿ ನಾನು ತಯಾರಿ ನಡೆಸುತ್ತೇನೆ ಹಾಗೂ 2014ರ ಚುನಾವಣೆಯಲ್ಲಿ ಬಿಜೆಪಿಯ ಶೇ 31ರಷ್ಟಿದ್ದ ಮತ ಗಳಿಕೆ ಪ್ರಮಾಣ ಆಗ ಶೇ 21ಕ್ಕೆ ಇಳಿಯುವಂತೆ ನೋಡಿಕೊಳ್ಳುತ್ತೇನೆ. ನಮ್ಮ ಆಂದೋಲನ ದೇಶಾದ್ಯಂತ ಪಸರಿಸುವಂತೆ ನೋಡಿಕೊಳ್ಳುತ್ತೇನೆ.

  • ಒಂದು ವೇಳೆ ಬಿಜೆಪಿ ಸೋತರೆ, ಮುಂದೇನು ?

ಹಾಗೇನಾದರೂ ಆದರೆ ಅದು ನನಗೆ ಬಹಳಷ್ಟು ಉತ್ತೇಜನಕಾರಿಯಾಗಲಿದೆಯಲ್ಲದೆ ರಾಷ್ಟ್ರ ರಾಜಕಾರಣದಲ್ಲಿ ನನ್ನ ಮಾತಿಗೆ ಹೆಚ್ಚು ಮನ್ನಣೆ ಕೂಡ ದೊರೆಯುವುದು.

  • ರ್ದಿಕ್ ಪಟೇಲ್ ಅವರನ್ನು ಬಿಜೆಪಿ ಆಗಾಗ ಏಕೆ ಟಾರ್ಗೆಟ್ ಮಾಡುತ್ತಿದೆ ?

ವಿಕಾಸ್ ಎಂಬುದು ಹುಚ್ಚಾಗಿ ಬಿಟ್ಟಿದೆ ಮತ್ತು ಕೊಳೆಯಾಗಿ ಹೋಗಿದೆ. ಇದೇ ಕಾರಣಕ್ಕೆ ಬಿಜೆಪಿ ಹಾರ್ದಿಕ್ ಪಟೇಲನನ್ನು ಟಾರ್ಗೆಟ್ ಮಾಡುತ್ತಿದೆ. ಹಾರ್ದಿಕ್ ಅವರು ದೊಡ್ಡ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತಿದ್ದಾರೆ ಹಾಗೂ ಬಿಜೆಪಿಗೆ ಬಲವಾಗಿಯೇ ಸಡ್ಡು ಹೊಡೆದಿದ್ದಾರೆ. ತನಗೆ ಯಾರಿಂದಾದಲೂ ಬೆದರಿಕೆಯಿದೆಯೆಂದಾಕ್ಷಣ ಅವರನ್ನು ಅದು ಟಾರ್ಗೆಟ್ ಮಾಡುತ್ತದೆ.