ಅಡ್ವೆ ನೀರಿನ ಸಮಸ್ಯೆ ಪರಿಹರಿಸದಿದ್ದಲ್ಲಿ ಹೋರಾಟದ ಎಚ್ಚರಿಕೆ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : “ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡ್ವೆ ಹೊಳೆಯ ನೀರು ಕೆಟ್ಟುಹೋಗಿ ವಾರ ಕಳೆದÀರೂ ಇನ್ನೂ ಅಧಿಕಾರಿಗಳು ವರದಿಯ ಹಿಂದೆ ಇದ್ದಾರೆ ಎಂಬುದು ಹಾಸ್ಯಾಸ್ಪದ. ತಾಂತ್ರಿಕತೆ ಮುಂದುವರಿದ ಈ ಕಾಲದಲ್ಲೂ ನೀರು ಪರೀಕ್ಷಾ ವರದಿಗೆ ಒಂದು ವಾರ ಬೇಕು ಎಂಬುದು ಜನ ಒಪ್ಪುವ ಮಾತಲ್ಲ. ಕಾರಣ ಏನೇ ಇರಬಹುದು ತಕ್ಷಣವೇ ಈ ಸಮಸ್ಯೆ ಪರಿಹಾರ ಮಾಡದಿದ್ದಲ್ಲಿ ಉಡುಪಿ ಜಿಲ್ಲಾ ಜೆಡಿಎಸ್ ಎಲ್ಲಾ ಜನರನ್ನು ಸೇರಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು” ಎಂದು ಉಡುಪಿ ಜಿಲ್ಲಾ ಅಧ್ಯಕ್ಷ ಯೋಗೀಶ್ ಶೆಟ್ಟಿ ಎಚ್ಚರಿಸಿದರು.

ಅಡ್ವೆ ಹೊಳೆಯ ತೀರಕ್ಕೆ ಆಗಮಿಸಿ ಹೊಳೆ ಸಹಿತ ಪಕ್ಕದ ಮನೆಗಳ ಬಾವಿ ಪರಿಶೀಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಯಾವುದೇ ಕಂಪನಿಗಳೊಂದಿಗೆ ಒಳಒಪ್ಪಂದ ಮಾಡಿಕೊಂಡು ಜನರ ಸಮಸ್ಯೆಯನ್ನು ಪರಿಹಾರ ಮಾಡದೆ ಜನರ ಪ್ರಾಣದ ಜೊತೆಗೆ ಚೆಲ್ಲಾಟವಾಡುವುದು ಸರಿಯಲ್ಲ. ಈ ಬಗ್ಗೆ ತಕ್ಷಣ ಸ್ಪಂದಿಸಿದರೆ ಒಳಿತು, ಇಲ್ಲ ಮುಂದಾಗುವ ತೊಂದರೆಗಳಿಗೆ ಜಿಲ್ಲಾಡಳಿತ ನೇರ ಹೊಣೆಯಾಗಬೇಕಾಗಿದೀತು” ಎಂಬುದಾಗಿ ಎಚ್ಚರಿಸಿದರು.

22pdb3

ಈ ಬಗ್ಗೆ ಸ್ಥಳೀಯ ಗ್ರಾ ಪಂ ಮಹಿಳಾ ಸದಸ್ಯೆಯೊಬ್ಬರು ಮಾತನಾಡಿ, “ಇದೀಗ ನೀರಿಗೆ ಯಾವುದೋ ರಾಸಾಯನಿಕ ಹಾಕುತ್ತಿದ್ದರಿಂದ ದುರ್ವಾಸನೆ ಕೊಂಚ ಕಡಿಮೆಯಾಗಿದೆ. ಆದರೆ ಸಂಪೂರ್ಣ ಶಮನಗೊಂಡಿಲ್ಲ. ತಾತ್ಕಾಲಿಕವಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಗ್ರಾ ಪಂ ಟ್ಯಾಂಕರ್ ಮೂಲಕ ಮಾಡುತ್ತಿದೆ. ದನಕರು, ನಾಯಿಗಳು ಈ ಹೊಳೆಯ ನೀರನ್ನು ಕುಡಿದ ಪರಿಣಾಮವಾಗಿ ಅದರ ಮೈ ರೋಮಗಳು ಉದುರುತ್ತಿರುವುದಲ್ಲದೆ ರೋಗಕ್ಕೆ ತುತ್ತಾಗಿದೆ. ಮತ್ತಷ್ಟು ಮಾರಕ ರೋಗಗಳು ಈ ಪ್ರದೇಶದ ಜನರನ್ನು ಬಾಧಿಸುವ ಮುನ್ನ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದರು.

ಆಯುಷ್ ಎಚ್ಚರಿಕೆ

ಆಯುಷ್ ಎಂಬ ಹೆಸರಲ್ಲಿ ಆಸ್ಪತ್ರೆಗಳ ತ್ಯಾಜ್ಯ ಸುಟ್ಟು ಪರಿಸರದ ಜನರ ಆರೋಗ್ಯಕ್ಕೆ ಹಾನಿ ಎಸಗುತ್ತಿರುವ ಕಂಪನಿಗೆ ಭೇಟಿ ನೀಡಿದ ಜೆಡಿಎಸ್ ಮುಖಂಡರು, “ಯಾವುದೇ ಕಾರಣಕ್ಕೆ ಯಾರೋ ಪ್ರಭಾವಿಗಳ ಬೆಂಬಲ ಇದೆ ಎಂಬುದಾಗಿ ಕಾನೂನು ಮೀರಿ ವರ್ತಿಸಿ, ಜನರ ಆರೋಗ್ಯಕ್ಕೆ ಸಮಸ್ಯೆ ತರುವಂತೆ ವ್ಯವಹರಿಸಿದರೆ ನಾವು ಸುಮ್ಮನಿರುವುದಿಲ್ಲ. ಈ ಕಂಪನಿ ವಿರುದ್ಧ ಹೋರಾಟ ಅನಿರ್ವಾಯವಾದೀತು” ಎಂಬುದಾಗಿ ಕಂಪನಿಯ ಮಾಲಕ ಮಾರುತಿ ಗೌಡರನ್ನು ಎಚ್ಚರಿಸಿದರು.

ನಿನ್ನೆಯ ಸಂಚಿಕೆಯಲ್ಲಿ `ಕರಾವಳಿ ಅಲೆ’ ತ್ಯಾಜ್ಯ ವಿಲೇ ಘಟಕದ ಕುರಿತು ಸಮಗ್ರ ವರದಿ ಪ್ರಕಟಿಸಿತ್ತು.