ಉಡುಪಿ ಆಸ್ಪತ್ರೆ ಖಾಸಗೀಕರಣ ವಿರೋಧಿಸಿ ಇಂದು ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಉಡುಪಿ : ರಾಜ್ಯ ಸರಕಾರವು ಇಲ್ಲಿನ ಸರಕಾರಿ ಮಕ್ಕಳ ಮತ್ತು ಮಹಿಳಾ ಆಸ್ಪತ್ರೆಯನ್ನು ಉದ್ಯಮಿ ಬಿ ಆರ್ ಶೆಟ್ಟಿಯವರ ಸಂಸ್ಥೆಗೆ ನೀಡಿ ಖಾಸಗೀಕರಣಗೊಳಿಸುತ್ತಿರುವುದನ್ನು ವಿರೋಧಿಸಿ ಇಂದು ಸರಕಾರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಉಳಿವಿಗಾಗಿ ನಾಗರಿಕರ ಒಕ್ಕೂಟದ ವತಿಯಿಂದ ನಗರದ ಚಿತ್ತರಂಜನ್ ಸರ್ಕಲ್ ಬಳಿ ಪ್ರತಿಭಟನೆ ಹಮ್ಮಿಕೊಂಡಿದೆ.

ಈ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಒಕ್ಕೂಟದ ಸಹಸಂಚಾಲಕ ಡಾ ಪಿ ವಿ ಭಂಡಾರಿ, “ಯೋಜನೆಯನ್ನು ಖಾಸಗೀಕರಣಗೊಳಿಸುವ ಸಂಬಂಧ ಈಗಾಗಲೇ ಎರಡೂ ಪಾರ್ಟಿಗಳೂ ಒಪ್ಪಂದಕ್ಕೆ ಸಹಿ ಮಾಡಿದ್ದು, ಇದರಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ಸಾರ್ವಜನಿಕರನ್ನು ಕತ್ತಲಲ್ಲಿ ಇಟ್ಟು ಆಸ್ಪತ್ರೆಯನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ಇದಕ್ಕೆ ನಮ್ಮ ವಿರೋಧವಿದೆ. ಆದರೆ ಮುಖ್ಯಮಂತ್ರಿ ಈ ಹಿಂದೆ ಈ ಆಸ್ಪತ್ರೆಯನ್ನು ಪಬ್ಲಿಕ್ ಪ್ರೈವೇಟ್ ಪಾರ್ಟನರಶಿಪ್ (ಪಿಪಿಪಿ) ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ಕೊಟ್ಟಿದ್ದು, ಅದು ಸುಳ್ಳಾಗಿದೆ” ಎಂದರು.

“ಆರ್ ಟಿ ಐ ಹಕ್ಕಿನಲ್ಲಿ ಕೇಳಲಾದ 10 ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಸರಕಾರವು ಸ್ಪಷ್ಟ ಮಾಹಿತಿ ನೀಡುವುದಕ್ಕೂ ತಡಕಾಡುತ್ತಿದೆ. ಆಸ್ಪತ್ರೆಯನ್ನು ಉದ್ಯಮಿ ಬಿ ಆರ್ ಶೆಟ್ಟಿಗೆ ಕೊಡುವ ಸಂದರ್ಭದಲ್ಲಿ ನಡೆಸಲಾದ ಎಲ್ಲಾ ಪ್ರಕ್ರಿಯೆಗಳನ್ನು ಸರಕಾರ ತರಾತುರಿಯಲ್ಲಿ ಮಾಡಿದ್ದು, ಖಾಸಗೀಕರಣದ ಉದ್ದೇಶ ಸ್ಪಷ್ಟವಾಗುತ್ತದೆ” ಎಂದೂ ಭಂಡಾರಿ ಹೇಳಿದರು.