ಕಾಮಗಾರಿ ಬೇರೆಡೆಗೆ ವರ್ಗಾಯಿಸಿದ್ದನ್ನು ಖಂಡಿಸಿ ಶ್ರಮದಾನ ಮೂಲಕ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ರಸ್ತೆ ಡಾಮರೀಕರಣಕ್ಕೆ ಮಂಜೂರಾದ ಕಾಮಗಾರಿಯನ್ನು ತಾಲೂಕು ಪಂಚಾಯತ್ ಸದಸ್ಯರು ಬೇರೆ ವಾರ್ಡಿಗೆ ಸ್ಥಳಾಂತರಿಸಿದನ್ನು ಪ್ರತಿಭಟಿಸಿ ಗ್ರಾಮಸ್ಥರು ಭಾನುವಾರ ಶ್ರಮದಾನ ಮೂಲಕ ರಸ್ತೆ ದುರಸ್ತಿ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

“ಬಂಜಾರು, ನೆಕ್ಕರೆ ಪ್ರದೇಶದಲ್ಲಿ 200ರಷ್ಟು ಮನೆಗಳಿದ್ದು, ಅದರಲ್ಲಿ 60ಕ್ಕೂ ಅಧಿಕ ದಲಿತ ಕುಟುಂಬಗಳಿವೆ. ಎರಡು ತಿಂಗಳ ಹಿಂದೆ ಈ ರಸ್ತೆಗೆ 25 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿ, ಕಾಮಗಾರಿ ಪ್ರಾರಂಭಿಸಲು ಜಲ್ಲಿಯನ್ನು ತಂದು ರಾಶಿ ಹಾಕಲಾಗಿತ್ತು. ಆದರೆ ಈ ಭಾಗದ ತಾಲೂಕು ಪಂಚಾಯತ್ ಸದಸ್ಯರು ಈ ಕಾಮಗಾರಿಯನ್ನು ಇಲ್ಲಿಂದ ಸ್ಥಳಾಂತರಿಸಿ, ಬೇರೆ ಕಡೆ ಕಾಮಗಾರಿ ನಡೆಸಿದ್ದಾರೆ” ಎಂದು ಕೇಶವ ಪೂಜಾರಿ ಆರೋಪಿಸಿದರು.

“ಇದನ್ನು ಗ್ರಾಮಸಭೆಯಲ್ಲಿ ಅವರೇ ಒಪ್ಪಿಕೊಂಡಿದ್ದಾರೆ. ಗ್ರಾಮದ ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬಾರದು. ಐದು ಕಿ ಮೀ ರಸ್ತೆಯು ಕಳೆದ ಐದು ವರ್ಷಗಳಿಂದ ಹದಗೆಟ್ಟಿದ್ದು, ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ಪಂಚಾಯಿತಿಯಲ್ಲೂ ಈ ಕುರಿತು ಪ್ರಸ್ತಾಪಿಸಿದ್ದೇನೆ. ಸರ್ಕಾರ ಶೀಘ್ರ ಸೂಕ್ತ ಅನುದಾನ ಮಂಜೂರು ಮಾಡಿದಲ್ಲಿ ಜನರು ಓಡಾಡುವುದಕ್ಕೆ ಅನುಕೂಲವಾಗುತ್ತದೆ” ಎಂದರು.

ಆಟೋ ಚಾಲಕ ಜೆರಾಲ್ಡ್ ವಾಸ್ ಮಾತನಾಡಿ, “ಇಲ್ಲಿನ ಜನರು ತಮ್ಮ ಮನೆಗಳಿಗೆ ತೆರಳಲು ಆಟೋವನ್ನು ಹೆಚ್ಚಾಗಿ ಅವಲಂಭಿಸುತ್ತಾರೆ. ಆದರೆ ರಸ್ತೆಯಲ್ಲಿ ನಮ್ಮ ಆಟೋ ಚಲಾಯಿಸಿದರೆ, ಬಾಡಿಗೆ ಹಣ ರಿಕ್ಷಾ ರಿಪೇರಿಗೆ ಸಾಕಗುವುದಿಲ್ಲ” ಎಂದು ಅಸಾಹಯಕತೆ ತೋಡಿಕೊಂಡರು.