ನಿಜವಾದ ಜಲೀಲ್ ಹಂತಕರನ್ನು ಬಂಧಿಸುವಲ್ಲಿ ಪೊಲೀಸ್ ವಿಫಲ

ಪ್ರತಿಭಟನೆ ನಡೆಸಲು ಸಂಘಟನೆಗಳ ಸಿದ್ಧತೆ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಕರೋಪಾಡಿ ಜಲೀಲ್ ಹತ್ಯೆ ನಡೆದು 7 ದಿನ ಕಳೆದರೂ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾದ ಹಿನ್ನೆಲೆಯಲ್ಲಿ ಸಂಘಟನೆಗಳು ಪ್ರತಿಭಟನೆಗೆ ಸಿದ್ಧತೆ ನಡೆಸಿವೆ.

“ಏಪ್ರಿಲ್ 20ರಂದು ಕರೋಪಾಡಿ ಪಂಚಾಯತ ಕಚೇರಿಯಲ್ಲಿ ಹಾಡಹಗಲೇ ಉಪಾಧ್ಯಕ್ಷ ಜಲೀಲ್ ಅವರನ್ನು ದುಷ್ಕರ್ಮಿಗಳು ಹತ್ಯೆ ನಡೆಸಿದ್ದರು. ಸ್ಥಳಕ್ಕಾಗಮಿಸಿದ್ದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು 2 ದಿನದೊಳಗೆ ಹಂತಕರನ್ನು ಪತ್ತೆ ಹಚ್ಚಿ ಬಂಧಿಸುತ್ತೇವೆಂದು ಹೇಳಿದ್ದರೂ ಇದೀಗ 7 ದಿನಗಳು ಮುಗಿದಿವೆ. ಹಂತಕರನ್ನು ಬಂಧಿಸುವಲ್ಲಿ ಇಲಾಖೆ ಸಂಪೂರ್ಣ ವಿಫಲವಾಗಿದೆ” ಎಂದು ಸಿಪಿಐಎಂ ಕಾರ್ಯದರ್ಶಿ ರಾಮಣ್ಣ ವಿಟ್ಲ ಆರೋಪಿಸಿದ್ದಾರೆ.

“ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದು ಜಿಲ್ಲಾ ಉಸ್ತುವಾರಿ ಸಚಿವರ ಬೆಂಬಲಿಗ ಜಲೀಲ್ ಕರೋಪಾಡಿಯ ಹಂತಕರನ್ನು ಬಂಧಿಸುವಲ್ಲಿ ಕಾಂಗ್ರೆಸ್ ಸಚಿವರಾಗಲೀ, ಜನಪ್ರತಿನಿಧಿಗಳಾಗಲೀ  ಮುತುವರ್ಜಿ ವಹಿಸದಿರುವುದು ದೌರ್ಭಾಗ್ಯ. ಕನ್ಯಾನ ಮತ್ತು ಕರೋಪಾಡಿ ಗ್ರಾಮಗಳಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ಕೊಲೆಯತ್ನ, ಕೊಲೆ, ಅತ್ಯಾಚಾರ, ಕಳ್ಳತನ ಮತ್ತು ಅಪಹರಣ ಎಗ್ಗಿಲ್ಲದೇ ನಡೆಯುತ್ತಿದೆ. ಅಪರಾಧ ಕೃತ್ಯಗಳನ್ನು ಮಟ್ಟಹಾಕಲು ಕನ್ಯಾನದಲ್ಲಿ ಪೊಲೀಸ್ ಠಾಣೆ ತೆರೆಯಬೇಕೆಂದು ಸಾರ್ವಜನಿಕರು ಮತ್ತು 2 ಗ್ರಾಮ ಪಂಚಾಯತುಗಳು ಕೂಡಾ ಸಾಕಷ್ಟು ಮನವಿ ಮಾಡಿದ್ದವು. ಆದರೆ ಇಲಾಖೆಯ ಅಧಿಕಾರಿಗಳಾಗಲೀ ಅಥವಾ ಉಸ್ತುವಾರಿ ಸಚಿವರಾಗಲೀ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡಿಲ್ಲ” ಎಂದರು.

“ಪೊಲೀಸ್ ಠಾಣೆ ತೆರೆಯುವ ಬದಲು ಕನ್ಯಾನ ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಿದ್ದಾರೆ. ಜನಪ್ರತಿನಿಧಿಗಳ ಮತ್ತು ಇಲಾಖೆಯ ನಿರ್ಲಕ್ಷ್ಯದಿಂದಾಗಿಯೇ ಜಲೀಲ್ ಹತ್ಯೆಯಾಗಿದೆ. ತೈಲ ಬೆಲೆಯೇರಿಕೆಯ ವಿರುದ್ಧ ಪ್ರತಿಭಟನೆ ನಡೆಸುವ ಪ್ರಚಾರಪ್ರಿಯ ನಾಯಕರು ಜಲೀಲ್ ಹಂತಕರ ಬಂಧನಕ್ಕಾಗಿ ತುಟಿ ಬಿಚ್ಚದಿರಲು ಕಾರಣವೇನು” ಎಂದು ಪ್ರಶ್ನಿಸಿದ ರಾಮಣ್ಣ, “ನೈಜ ಹಂತಕರನ್ನು ಬಂಧಿಸಲು ಅಧಿಕಾರಿಗಳು ಮತ್ತು ಆಡಳಿತ ಮುಖಂಡರು ವಿಫಲರಾದ ಹಿನ್ನೆಲೆಯಲ್ಲಿ ಸಮಾನಮನಸ್ಕ ಸಂಘಟನೆಗಳ ಮತ್ತು ಸಾರ್ವಜನಿಕರ ಬೆಂಬಲದೊಂದಿಗೆ ಹೋರಾಟ ನಡೆಸುತ್ತೇವೆ” ಎಂದರು. ಇನ್ನೆರಡು ದಿನಗಳಲ್ಲಿ ಜಲೀಲ್ ಹತ್ಯೆಯ ನೈಜ ಹಂತಕರನ್ನು ಬಂಧಿಸದಿದ್ದಲ್ಲಿ ಕರೋಪಾಡಿ ಪಂಚಾಯತು ಮುಂದೆ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ರಾಮಣ್ಣ ಎಚ್ಚರಿಸಿದ್ದು ಅದಕ್ಕಾಗಿ ಸಿದ್ಧತೆ ನಡೆಯುತ್ತಿದೆ.

LEAVE A REPLY