ಮರಳು ಅಭಾವದ ವಿರುದ್ಧ ಅಕ್ಟೋಬರ್ 16ಕ್ಕೆ ಧರಣಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಅಕ್ರಮ ಸಾಗಾಟಕ್ಕೆ ಬ್ರೇಕ್ ಹಾಕಿ ಜಿಲ್ಲೆಯಾದ್ಯಂತ ತಲೆದೋರಿರುವ ಮರಳು ಅಭಾವ ನೀಗಿಸುವಂತೆ ಒತ್ತಾಯಿಸಿ ಇದೇ 16ರಂದು ಬಂಟ್ವಾಳ ತಾಲೂಕು ಕಚೇರಿ ಮುಂದೆ ಸಿಐಟಿಯು ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರ ಸಂಘವು ಪ್ರತಿಭಟನೆ ನಡೆಸಲಿದೆ.

ಕರಾವಳಿಯಲ್ಲಿ ನೈಸರ್ಗಿಕವಾಗಿ ಅಪಾರ ಪ್ರಮಾಣದಲ್ಲಿ ಮರಳು ಶೇಖರಣೆಯಾಗಿದ್ದರೂ ಜಿಲ್ಲೆಯ ಜನರಿಗೆ ಮಾತ್ರ ಮರಳು ದೊರಕದಂತಾಗಿದೆ. ಮರಳು ವಿಚಾರದಲ್ಲಿ ಸರಕಾರ ತೆಗೆದುಕೊಂಡ ತಪ್ಪು ನಿರ್ಧಾರದಿಂದಾಗಿ ಕಟ್ಟಡ ಕಾರ್ಮಿಕರು ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದ ಸಂದರ್ಭ ಸಚಿವ ಕೃಷ್ಣ ಪಾಲೆಮಾರ್ ಜಿಲ್ಲೆಯ ಜನರ ಹಿತಾಸಕ್ತಿ ಕಾಪಾಡಲು ಜಾರಿಗೆ ತಂದಿದ್ದ ನೀತಿಗಳು ಇಂದು ಬೇರೆ ಬೇರೆ ದಿಕ್ಕುಗಳತ್ತ ಚಲಿಸಿ ಮರಳು ಮಾಫಿಯಾಗಳನ್ನೇ ಸೃಷ್ಟಿಸಿದೆ ಎಂದು ಸಿಐಟಿಯು ಮುಖಂಡ ರಾಮಣ್ಣ ವಿಟ್ಲ ಹೇಳಿದರು. ಅಕ್ರಮ ಮರಳು ದಂಧೆಯಿಂದಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಕೆಲ ವ್ಯಕ್ತಿಗಳು ಮಾತ್ರ ಕೋಟ್ಯಾಧೀಶರಾಗಿದ್ದು, ಮರಳು ಅಭಾವ ನೀಗಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ರಾಮಣ್ಣ ಆರೋಪಿಸಿದ್ದಾರೆ. ಸಿಐಟಿಯು ನೇತೃತ್ವದಲ್ಲಿ ಇದೇ 16ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ಬಂಟ್ವಾಳ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಯಲಿದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಾಮಣ್ಣ ತಿಳಿಸಿದ್ದಾರೆ.