ಮಲಯಾಳೀಕರಣ ಸುಗ್ರೀವಾಜ್ಞೆ ವಿರುದ್ಧ ತಾರಕ್ಕೇರಿದ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : “ಮಲೆಯಾಳ ಭಾಷಾ ಮಸೂದೆಯನ್ನು ಜಾರಿಗೊಳಿಸಿರುವುದು ಗಡಿನಾಡಿನ ಕನ್ನಡಿಗರ ಸಾಂವಿಧಾನಿಕ ಹಕ್ಕಿನ ವಿರುದ್ಧ ಪ್ರತಿಕೂಲ ಪರಿಣಾಮ ಬೀರಲಿದ್ದು, ಇಲ್ಲಿನ ಕನ್ನಡಿಗರು ಈ ಬಗ್ಗೆ ಉಗ್ರ ಕ್ರಮ ಕೈಗೊಳ್ಳಲಿದ್ದೇವೆ. ಭಾಷಾ ಮಸೂದೆ ಕೇವಲ ಕನ್ನಡ ಮಾಧ್ಯಮ ಅಧ್ಯಾಪಕರ ಸಮಸ್ಯೆ ಮಾತ್ರವಾಗಿರದೇ ಸಮಸ್ತ ಕನ್ನಡಿಗರ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಕನ್ನಡಿಗನೂ ಎಚ್ಚೆತ್ತು ಹೋರಾಟಕ್ಕಿಳಿಯುವ ಅನಿವಾರ್ಯತೆ ಇದೆ” ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು ಹೇಳಿದರು

ಕೇರಳ ಸುಗೀವಾಜ್ಞೆಯ ಮೂಲಕ ಜಾರಿಗೆ ತಂದ ಭಾಷಾ ಮಸೂದೆಯ ವಿರುದ್ಧ ಕೇರಳ ಪ್ರಾಂತ್ಯ ಕನ್ನಡ ಅಧ್ಯಾಪಕ ಸಂಘಟನೆಯ ಮಂಜೇಶ್ವರ ಉಪಜಿಲ್ಲಾ ಘಟಕ ಬುಧವಾರ ಉಪ್ಪಳದ ನಯಾ ಬಝಾರಿನಲ್ಲಿರುವ ಸಹಾಯಕ ವಿದ್ಯಾಧಿಕಾರಿಗಳ ಕಚೇರಿಯ ಮಂದೆ ನಡೆಸಿದ

ಒಂದು ದಿನದ ಸಾಂಕೇತಿಕ ಉಪವಾಸ  ಸತ್ಯಾಗ್ರಹಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು “ಗಡಿನಾಡು ಕಾಸರಗೋಡಿನ ಕನ್ನಡಿಗರ ವಿರುದ್ಧ ದಮನಕಾರಿ ನೀತಿರೂಪಣೆಯಲ್ಲಿ ಸರಕಾರ ಮತ್ತು ಸ್ಥಾಪಿತ ಹಿತಾಸಕ್ತಿಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿಯ ಮೂಲ ನಿವಾಸಿಗಳಾದ ಕನ್ನಡಿಗರ ಬಹುಕಾಲದ ಬೇಡಿಕೆಗಳನ್ನು ನಿರ್ಲಕ್ಷ್ಯಿಸಿ, ಕಡ್ಡಾಯ ಮಲೆಯಾಳ ಹೇರಿಕೆಯ ಕುತಂತ್ರ ನಡೆಯುತ್ತಿದೆ. ಈ ಬಗ್ಗೆ ಸಾಂವಿಧಾನಿಕ ಹಕ್ಕುಗಳಿದ್ದರೂ ಅದನ್ನು ಮರೆಮಾಚಿ ವಂಚಿಸುತ್ತಿರುವ ಕ್ರಮ ಖಂಡನೀಯ. ಕನ್ನಡಿಗರೆಲ್ಲ ಒಗ್ಗಟ್ಟಾಗಿ ಎದ್ದು ನಿಂತು ಉಗ್ರ ಸ್ವರೂಪದ ಪ್ರತಿಭಟನೆಗಿಳಿಯುವ ಮೊದಲು ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಹಲವಾರು ಮಂದಿ ಪಾಲ್ಗೊಂಡಿದ್ದರು.

LEAVE A REPLY