ತೆರಿಗೆ ಇಳಿಸಲು ಆಗ್ರಹಿಸಿ ಪಾಲಿಕೆ ಎದುರು ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು ನಗರ ಪಾಲಿಕೆಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಶೇ 15ರಷ್ಟು ಹಾಗೂ ನೀರಿನ ಕನಿಷ್ಠ ದರವನ್ನು ಶೇ 100ರಷ್ಟು ಏರಿಕೆ ಮಾಡಲು ಮುಂದಾದ ವಿರುದ್ಧ ಬಿಜೆಪಿಯ ಮಂಗಳೂರು ನಗರ ಉತ್ತರ ಹಾಗೂ ದಕ್ಷಿಣ ಕ್ಷೇತ್ರದ ವತಿಯಿಂದ ಬೃಹತ್ ಪ್ರತಿಭಟನೆ ಪಾಲಿಕೆ ಮುಂಭಾಗದಲ್ಲಿ ನಡೆಯಿತು.

ಸ್ವಯಂಘೋಷಿತ ಆಸ್ತಿ ತೆರಿಗೆ ಮತ್ತು ನೀರಿನ ದರವನ್ನು ಏರಿಕೆ ಮಾಡಿರುವ ಪಾಲಿಕೆ ನಿರ್ಧಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು. ಈ ಸಂದರ್ಭ ಮಾತನಾಡಿದ ಪಾಲಿಕೆ ವಿಪಕ್ಷ ನಾಯಕಿ ರೂಪಾ ಡಿ ಬಂಗೇರ, “ಪಾಲಿಕೆಯ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಮೇಯರ್ ಹರಿನಾಥ್ ಗಾಳಿಗೆ ತೂರಿದ್ದಾರೆ. ಈಗಾಗಲೇ ಹಲವು ಸಮಸ್ಯೆಗಳಿಂದ ಕಂಗೆಟ್ಟಿರುವ ಜನತೆ ಇದೀಗ ಪಾಲಿಕೆಯ ಸ್ವಯಂಘೋಷಿತ ಆಸ್ತಿ ತೆರಿಗೆ ಏರಿಕೆಯಿಂದ ಇನ್ನಷ್ಟು ಆತಂಕಗೊಂಡಿದ್ದಾರೆ. ಕೂಡಲೇ ಇದನ್ನು ಕೈಬಿಡಬೇಕು” ಎಂದು ಆಗ್ರಹಿಸಿದರು.

ಕೇಂದ್ರ ಸರಕಾರದ ಅಟಲ್ ಯೋಜನೆಯ ಅನುದಾನವನ್ನು ಪಾಲಿಕೆಯು ವಿವಿಧ ಇತರೆ ದುರಸ್ತಿ, ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿಕೊಂಡಿದೆ ಎಂದು ರೂಪಾ ಬಂಗೇರ ಆರೋಪಿಸಿದರು.