ಚೆರ್ಕಳ-ಕಲ್ಲಡ್ಕ ರಸ್ತೆ ದುರಸ್ತಿಗೆ ಆಗ್ರಹಿಸಿ ನಡೆಯುತ್ತಿರುವ ಮುಷ್ಕರ ಏಳನೇ ದಿನಕ್ಕೆ

ಮುಷ್ಕರದಲ್ಲಿ ಶ್ರೀಕಾಂತ್ ಮಾತನಾಡುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : “ಹಿಂದಿನ ಮುಂಗಡಪತ್ರದಲ್ಲಿ ಕೈಗೊಂಡ ತೀರ್ಮಾನಗಳನ್ನು ಮುಂದಿನ ಮುಂಗಡಪತ್ರದ ಮೊದಲೇ ಪೂರ್ತಿಗೊಳಿಸಬೇಕಾಗಿರುವುದು ಆಡಳಿತದವರ ಕರ್ತವ್ಯ. ಆ ಕೆಲಸವನ್ನು ಮಾಡದಿರುವುದು ವಿಧಾನಸಭೆಗೇ ಅವಮಾನ ಮಾಡಿದಂತೆ. ತೆರಿಗೆ ಮೂಲಕ ಪಡಕೊಂಡ ಜನರ ಹಣವನ್ನು ಜನರಿಗಾಗಿ ಮೀಸಲಿರಿಸಿದರೆ ಸಾಲದು. ಅದರ ಮೂಲಕ ಜನತೆಯ ಅವಶ್ಯಕತೆಯನ್ನು ಪೂರ್ತಿಗೊಳಿಸುವ ಜವಾಬ್ದಾರಿ ಸರಕಾರ, ಅಧಿಕಾರಿ ವರ್ಗಕ್ಕೆ ಇದೆ” ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಕೆ ಶ್ರೀಕಾಂತ್ ಹೇಳಿದರು.

ಅವರು ಗುರುವಾರ ಚೆರ್ಕಳ-ಕಲ್ಲಡ್ಕ, ಬದಿಯಡ್ಕ-ಏತಡ್ಕ-ಸುಳ್ಳ್ಯಪದವು, ಮುಳ್ಳೇರಿಯ-ಆರ್ಲಪದವು ಮೊದಲಾದ ರಸ್ತೆಗಳ ಶೋಚನೀಯಾವಸ್ಥೆ ಪರಿಹರಿಸಬೇಕೆಂಬ ಬೇಡಿಕೆಯನ್ನಿರಿಸಿ ಜನಪರ ಹೋರಾಟ ಸಮಿತಿ ನೇತೃತ್ವದಲ್ಲಿ ಬದಿಯಡ್ಕದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಕಾಲ ಮುಷ್ಕರದ 7ನೇ ದಿನದಲ್ಲಿ ಮಾತನಾಡಿದರು.

“ಕಾಸರಗೋಡಿನ ಜನರ ವಿರುದ್ಧ ಯಾಕೋ ಅಧಿಕಾರಿ ವರ್ಗ ಮುನಿಸಿಕೊಂಡಿದೆ. ಇಲ್ಲಿನ ಜಿಲ್ಲಾ ಪಂಚಾಯತು ಹಾಗೂ ಗ್ರಾಮ ಪಂಚಾಯತುಗಳನ್ನು ಇಲ್ಲವಾಗಿಸಲು ತಂತ್ರ ಹೂಡುತ್ತಿದೆಯೋ ಎಂಬ ಅನುಮಾನ ಕಾಡುತ್ತಿದೆ. ಒಗ್ಗಟ್ಟಿನಿಂದ ನಾವು ಹೋರಾಡೋಣ” ಎಂದರು.