ಎರುಕಡಪು-ಗೇರುಕಟ್ಟೆ ಅಭಿವೃದ್ಧಿಗೆ ಒತ್ತಾಯಿಸಿ ಕೊಯ್ಯೂರು ಪಂಚಾಯತ್ ಎದುರು ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಸಮುದಾಯ ಸಮಿತಿ ಮತ್ತಿತರ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಆದೂರುಪೇರಾಲ್-ಎರುಕಡಪು-ಗೇರುಕಟ್ಟೆ ರಸ್ತೆ ಅಭಿವೃದ್ಧಿ, ಉಣ್ಣಾಲು-ಬರಾಯದಡ್ಡ ರಸ್ತೆ ದುರಸ್ತಿ ಮತ್ತಿತರ ಮೂಲಭೂತ ಸೌಕರ್ಯಗಳ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಯ್ಯೂರು ಗ್ರಾ ಪಂ ಕಚೇರಿ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

“ಗ್ರಾ ಪಂ ವ್ಯಾಪ್ತಿಯ 3ನೇ ವಾರ್ಡಿನಲ್ಲಿರುವ ಸಾರ್ವಜನಿಕ ಕೊಳವೆಬಾವಿಯ ನೀರನ್ನು ಸ್ಥಗಿತಗೊಳಿಸಿ 2 ಕಿಮೀ ದೂರದಿಂದ ಕುಡಿಯುವ ನೀರು ಸರಬರಾಜು ಸಮರ್ಪಕವಾಗಿಲ್ಲ. ತಾರತಮ್ಯದ ಮನೆ ತೆರಿಗೆ ವಸೂಲಿ ಮಾತ್ರವಲ್ಲದೆ ಡೋರ್ ನಂಬರ್ ನೆಪದಲ್ಲಿ ಪ್ರತೀ ಮನೆಯಿಂದ 80 ರೂ ವಸೂಲಿ ಮಾಡಲಾಗುತ್ತಿದೆ. ದಾರಿದೀಪಗಳು ಕೆಟ್ಟು ಹೋಗಿದೆ. ಬಡವರಿಗೆ ಸಮರ್ಪಕವಾಗಿ ಮನೆ ಮಂಜೂರಾಗುತ್ತಿಲ್ಲ. ಪಂ ವ್ಯಾಪ್ತಿಯ ರಸ್ತೆ ಬದಿಯ ಚರಂಡಿ ನಿರ್ವಹಣೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕು” ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.  “94ಸಿ ಅರ್ಜಿಗಳಿಗೆ ಸ್ಪಂದಿಸಿ ಹಕ್ಕುಪತ್ರ ಒದಗಿಸಲು ಕ್ರಮಕೈಗೊಂಡು ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು.  ರಸ್ತೆ ಹದಗೆಡಲು ಕಾರಣವಾಗಿರುವ ಎರುಕಡಪು ಪರಿಸರದ ನದಿಯ ಅಕ್ರಮ ಮರಳು ದಂಧೆಯನ್ನು ನಿಲ್ಲಿಸಬೇಕು” ಇತ್ಯಾದಿ ಬೇಡಿಕೆಗಳನ್ನು ಪ್ರತಿಭಟನಾಕಾರರು ಮುಂದಿಟ್ಟರು.  ಡಿವೈಎಫೈ ಮುಖಂಡ ಬಿ ಎಂ ಭಟ್ ಮಾತನಾಡಿ, “ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸುವುದು ಗ್ರಾ ಪಂ ಆಡಳಿತದ ಜವಾಬ್ದಾರಿಯಾಗಿದ್ದು, ಆದೂರು ಪೇರಾಲ್-ಗೇರುಕಟ್ಟೆ ರಸ್ತೆಯ ಅಭಿವೃದ್ಧಿ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಆಗಮಿಸಿ ಸ್ಪಷ್ಟ ಉತ್ತರ ನೀಡಬೇಕು” ಎಂದು ಪಟ್ಟು ಹಿಡಿದು ದೂರವಾಣಿ ಮೂಲಕ ಮೇಲಧಿಕಾರಿಗಳನ್ನು ಸಂಪರ್ಕಿಸಿ ಬೇಡಿಕೆಗಳನ್ನು ತಿಳಿಸಿ ಸೂಕ್ತ ಭರವಸೆ ನೀಡುವಂತೆ ಮನವೊಲಿಸಿದರು.

ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಸಂಬಂಧಪಟ್ಟ ಇಂಜಿನಿಯರ್ ಎರುಕಡಪು-ಗೇರುಕಟ್ಟೆ ರಸ್ತೆಯನ್ನು 15 ದಿನಗಳೊಳಗಾಗಿ ತಾತ್ಕಾಲಿಕ ದುರಸ್ತಿಗೊಳಿಸುವ ಭರವಸೆ ನೀಡಿದರು. ಪ್ರತಿಭಟನಾಕಾರರ ಬೇಡಿಕೆ ಸ್ವೀಕರಿಸಿದ ಪಂ ಅಭಿವೃದ್ಧಿ ಅಧಿಕಾರಿ ಆರೋಪಗಳಿಗೆ ಸಮಜಾಯಿಷಿ ನೀಡಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.