ಹೆಬ್ರಿ ಆರೋಗ್ಯ ಕೇಂದ್ರದ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

ಸಾಂದರ್ಭಿಕ ಚಿತ್ರ

ಕಾರ್ಕಳ : ಹೆಬ್ರಿ ಆರೋಗ್ಯ ಕೇಂದ್ರದ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡರೂ ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದು, ಅವ್ಯವಸ್ಥೆಯ ಗೂಡಾಗಿದೆ. ಚಿಕಿತ್ಸೆಗೆಂದು ಬರುವ ರೋಗಿಗಳಿಗೆ ಸರಿಯಾಗಿ ವೈದ್ಯರೇ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೊರ ನೋಟಕ್ಕೆ ಮಾತ್ರ ದೊಡ್ಡ ಆಸ್ಪತ್ರೆ ಕಾಣುತ್ತಿದ್ದು, ಒಳಗೆ ಯಾವುದೇ ಸರಯಾದ ಸೌಲಭ್ಯಗಳಿಲ್ಲ. ಅಲ್ಲದೆ ಇಲ್ಲಿ ಒಬ್ಬರೇ ವೈದ್ಯಾಧಿಕಾರಿಯಿದ್ದು, ಕಚೇರಿ ಕೆಲಸ ಸೇರಿದಂತೆ ಪ್ರತಿಯೊಂದು ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ಆರೋಗ್ಯ ಕೇಂದ್ರದ ಅವ್ಯವಸ್ಥೆಯನ್ನು ಖಂಡಿಸಿ, ಪ್ರಗತಿಪರ ನಾಗರಿಕ ಸೇವಾ ಸಮಿತಿಯ ಆಶ್ರಯದಲ್ಲಿ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ನಡೆಯಿತು.

ಹೋರಾಟ ಸಮಿತಿಯ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ಮಾತನಾಡಿ, “ಮುಂದಿನ ದಿನಗಳಲ್ಲಿ ಇದೇ ಸಮಸ್ಯೆ ಮುಂದುವರಿದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು” ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಇಲಾಖೆ ಕೂಡಲೇ ಗಮನಹರಿಸಿ ಸಮಸ್ಯೆ ಪರಿಹರಿಸುವಂತೆ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ರೋಹಿಣಿ ಅವರಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿದ ಆರೋಗ್ಯಾಧಿಕಾರಿ ಸಮಸ್ಯೆಯನ್ನು ಪರಿಶೀಲಿಸುವಂತೆ ತಾಲೂಕು ಅಧಿಕಾರಿಗಳಿಗೆ ತಿಳಿಸಿದ್ದು, ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆಯನ್ನು ಸರಿಪಡಿಸುವಂತೆ ವರದಿ ನೀಡಿದ್ದು, ಈ ಪ್ರಕಾರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸುತ್ತಮುತ್ತಲ ಗ್ರಾಮಗಳು ಹಾಗೂ ತಾಲೂಕುಗಳಿಂದ ಪ್ರತೀ ತಿಂಗಳು ಸುಮಾರು 4000ದಿಂದ 4500ರವರೆಗೆ ಹೊರರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಹೆದ್ದಾರಿಯ ಪಕ್ಕದಲ್ಲಿದ್ದು ಸಾಕಷ್ಟು ಎಂ ಎಲ್ ಸಿ ಪ್ರಕರಣಗಳು ಕೂಡ ದಾಖಲಾಗುತ್ತವೆ. ಭೌಗೋಳಿಕವಾಗಿಯೂ ಕೂಡ ಕೇಂದ್ರ ಸ್ಥಾನದಲ್ಲಿರುತ್ತದೆ. ಒಟ್ಟು 1 ಹಿರಿಯ ವೈದ್ಯಾಧಿಕಾರಿ ಹಾಗೂ 3 ತಜ್ಞ ವೈದ್ಯರ ಹುದ್ದೆ ಮಂಜೂರಾಗಿದ್ದು ಪ್ರಸ್ತುತ ಒಬ್ಬ ಹಿರಿಯ ವೈದ್ಯಾಧಿಕಾರಿ ಹಾಗೂ ಒಬ್ಬ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಬ್ಬ ಆಯುಷ್ ವೈದ್ಯಾಧಿಕಾರಿ, ಒಬ್ಬ ದಂತ ವೈದ್ಯಾಧಿಕಾರಿ ಕರ್ತವ್ಯದಲ್ಲಿರುತ್ತಾರೆ. ಆದ್ಯತೆಯ ಮೇರೆಗೆ ಎಲ್ಲಾ ತಜ್ಞ ವೈದ್ಯರ ಹುದ್ದೆಯನ್ನು ಭರ್ತಿ ಮಾಡುವಂತೆ ವರದಿ ಮಾಡಿದ್ದಾರೆ. ಹಾಗೂ ಅಲ್ಲಿಯವರೆಗೆ 2 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಯವರನ್ನು ನೇಮಿಸುವಂತೆ ವರದಿಯಲ್ಲಿ ತಿಳಿಸಲಾಗಿದೆ.