ಪಿಡಿಓ ಅಮಾನತು ವಿರೋಧಿಸಿ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಪುತ್ತಿಗೆ ಗ್ರಾಮ ಪಂಚಾಯತ ಪಿಡಿಓ ಮಾರ್ಶಲ್ ಡಿಸೋಜಾ ಅವರ ಅಮಾನತು ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಬುಧವಾರ ಪುತ್ತಿಗೆ ಪಂಚಾಯತ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಾಸುದೇವ ನಾಯಕ್, “ಜಿ ಪಂ ಸಿಇಓ ಯಾವುದೇ ನೋಟಿಸ್ ನೀಡದೆ ಏಕಾಏಕಿ ಪುತ್ತಿಗೆ ಪಂಚಾಯತ ಪಿಡಿಓ ಅವರನ್ನು ಅಮಾನತು ಮಾಡಿದ್ದಾರೆ. ಇದರ ಹಿಂದೆ ಪಂಚಾಯತ ಉಪಾಧ್ಯಕ್ಷೆ ಸಹಿತ ಕೆಲವರ ಒತ್ತಡವಿದೆ. ಉದ್ಯೋಗ ಖಾತರಿಯಲ್ಲಿ ಪುತ್ತಿಗೆ ಪಂಚಾಯತಿಯಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಕಳೆದ ವಾರ ಪುತ್ತಿಗೆಗೆ ಭೇಟಿ ನೀಡಿದ್ದ ಸಿಇಓ ಕೆಲಸಗಳನ್ನು ಪರಿಶೀಲಿಸದೆ, ಕೇವಲ ಕಿಂಡಿ ಅಣೆಕಟ್ಟು ಆಗಲಿಲ್ಲವೆಂದು ಅಸಮಧಾನ ವ್ಯಕ್ತಪಡಿಸಿರುವುದು ಸರಿ ಅಲ್ಲ, ಅಮಾನತು ಆದೇಶ ಹಿಂದಕ್ಕೆ ಪಡೆಯಬೇಕು” ಎಂದರು.

ಪಂಚಾಯತ ಸದಸ್ಯ ಶಶಿಧರ ನಾಯಕ್ ಮಾತನಾಡಿ, “ಮಂಗಳೂರು ತಾಲೂಕಿನಲ್ಲೇ ಅಭಿವೃದ್ಧಿ ಕೆಲಸಗಳಲ್ಲಿ ಪುತ್ತಿಗೆ ಪಂಚಾಯಿತಿ 5ನೇ ಸ್ಥಾನದಲ್ಲಿದೆ. ಕಾಮಗಾರಿ, ಅಭಿವೃದ್ಧಿ ಚಟುವಟಿಕೆಗಳಲ್ಲಿ ಪಿಡಿಓ ಅವರ ಮುತುವರ್ಜಿಯೂ ಇದೆ. ಇಂತಹುದರಲ್ಲಿ ಪಿಡಿಓ ಅವರನ್ನು ಏಕಾಏಕಿ ಅಮಾನತುಗೊಳಿಸಿರುವ ಉದ್ದೇಶವಾದರೂ ಏನು ? ಸಿಇಓ ಕೇವಲ ಒಂದಿಬ್ಬರ ಒತ್ತಡಕ್ಕೊಳಗಾಗಿ ಗ್ರಾಮಸ್ಥರ ಹಿತಾಸಕ್ತಿಯನ್ನು ನಿರ್ಲಕ್ಷಿಸಿದ್ದಾರೆ” ಎಂದು ಆರೋಪಿಸಿದರು. ಜಿ ಪಂ ಸಿಇಓ ನಿರ್ದೇಶನದಂತೆ ಪ್ರತಿಭಟನಕಾರರ ಮನವಿಯನ್ನು ತೆಂಕಮಿಜಾರು ಪಿಡಿಓ ಸಾಯೀಶ್ ಚೌಟ್ ಸ್ವೀಕರಿಸಿ, ಮೇಲಧಿಕಾರಿಗೆ ರವಾನಿಸಿದರು.