ಓಲಾ, ಉಬರ್ ವಿರುದ್ಧ ರಿಕ್ಷಾವಾಲಾರ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದಲ್ಲಿ ಆನ್ಲೈನ್ ಟ್ಯಾಕ್ಸಿಗಳಾದ ಓಲಾ ಮತ್ತು ಉಬರ್ ಕಾರುಗಳು ಕಾನೂನುಬಾಹಿರವಾಗಿ ಓಡಾಟ ನಡೆಸುತ್ತಿದ್ದು, ಕೂಡಲೇ ಇವುಗಳ ಪರವಾನಿಗೆ ರದ್ದುಗೊಳಿಸಬೇಕೆಂದು ಆಗ್ರಹಿಸಿ ಮಂಗಳೂರು ನಗರ ಆಟೋ ಚಾಲಕ ಮಾಲಕರ ಒಕ್ಕೂಟದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ತಮ್ಮ ಆಟೋಗಳನ್ನು ಕೇಂದ್ರ ಮೈದಾನದಲ್ಲಿ ನಿಲ್ಲಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮಂಗಳೂರು ಮಿನಿ ವಿಧಾನ ಸೌಧದಿಂದ ಆರ್ ಟಿ ಎ ಕಚೇರಿಯವರೆಗೆ ಹಾಗೂ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಜಾಥಾ ನಡೆಸಿ ಜಿಲ್ಲಾಧಿಕಾರಿಗೆ ಒತ್ತಡ ಹಾಕಿದರು.

ರಿಕ್ಷಾ ಚಾಲಕರ ಸಂಘದ ಮುಖಂಡ ಅರುಣ್ ಕುಮಾರ್ ಮಾತನಾಡಿ, “ಓಲಾ, ಉಬರ್ ಕಾರು ಚಾಲಕರು ಇಲ್ಲಿ ಬಾಡಿಗೆ ಮಾಡುವುದಕ್ಕೆ ಕಾನೂನಾತ್ಮಕವಾಗಿ ಪರವಾನಿಗೆ ಪಡೆದುಕೊಂಡಿಲ್ಲ. ಇದರಿಂದ ಸ್ಥಳೀಯ ರಿಕ್ಷಾ ಚಾಲಕರಿಗೆ ತೊಂದರೆ ಉಂಟಾಗಿದೆ. ಸಾರಿಗೆ ವಾಹನಗಳು ಕಡ್ಡಾಯವಾಗಿ ಮೀಟರ್ ಅಳವಡಿಸಬೇಕೆಂಬ ನಿಯಮವಿದೆ. ಸಾರಿಗೆ ಪ್ರಾಧಿಕಾರದಿಂದ ನಿಗದಿ ಪಡಿಸಿರುವ ಮೀಟರ್ ದರವನ್ನೇ ಪಡೆದುಕೊಳ್ಳಬೇಕು. ನಗರದಲ್ಲಿ ಸೂಕ್ತ ಪರವಾನಿಗೆ ಇರಬೇಕೆಂಬ ನಿಯಮವಿದೆ. ಆದರೆ ಉಬರ್ ಮತ್ತು ಓಲಾ ಟ್ಯಾಕ್ಸಿ ಚಾಲಕರು ಈ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಆನ್ಲೈನ್ ಕಾರು ಚಾಲಕರ ಓಡಾಟದಿಂದ ಬಡ ರಿಕ್ಷಾ ಚಾಲಕರು ಕಷ್ಟ ಎದುರಿಸುವಂತಾಗಿದೆ. ಕಡಿಮೆ ಬಾಡಿಗೆ ದರದಲ್ಲಿ ಪ್ರಯಾಣಿಕರನ್ನು ಸಾಗಿಸುವುದಾಗಿ ಹೇಳುವ ಈ ಆನ್ಲೈನ್ ಟ್ಯಾಕ್ಸಿಗಳು ರಿಕ್ಷಾ ಚಾಲಕರ ಬದುಕಿಗೆ ಕೊಡಲಿಯೇಟು ನೀಡುತ್ತಿವೆ” ಎಂದು ರಿಕ್ಷಾ ಚಾಲಕರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಜಿಲ್ಲಾಧಿಕಾರಿ, ಕಮಿಷನರ್ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.