ಮುದ್ರಾಡಿಯ ಹೊಸ ಮದ್ಯದಂಗಡಿ ಅನುಮತಿ ವಿರೋಧಿಸಿ ಪ್ರತಿಭಟನೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : “ಜನರ ಬಗ್ಗೆ ಕಾಳಜಿ ಇರುವ ಸರಕಾರ ಜನರಿಗೆ ಬೇಕಾದುದನ್ನು ಕೊಡುವ ಬದಲು ಮನೆಮಠವನ್ನು ಕೆಡಿಸುವ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ತೋರುತ್ತಿದೆ. ಈಗಾಗಲೇ ಕರ್ನಾಟಕ ರಾಜ್ಯದಾದ್ಯಂತ ಸರಕಾರದಿದಿಂದಲೇ ನಡೆಸುವಂತಹ ಸುಮಾರು 900 ಮದ್ಯದಂಗಡಿ ಸೇರಿದಂತೆ ಕಾರ್ಕಳ ತಾಲೂಕಿನಲ್ಲಿ 6 ಮದ್ಯದಂಗಡಿಗಳನ್ನು ತೆರೆಯಲು ಸರ್ವೆ ಕಾರ್ಯ ನಡೆಸುತ್ತಿದೆ. ಬಡ ಸಂಸಾರಗಳನ್ನು ಬೀದಿಗೆ ತಳ್ಳುವ ಕೆಲಸ ರಾಜ್ಯ ಸರಕಾರ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಮದ್ಯದಂಗಡಿಗಳನ್ನು ತೆರೆಯಲು ಬಿಡುವುದಿಲ್ಲ” ಎಂದು ಕಾರ್ಕಳ ಶಾಸಕ ಸುನಿಲಕುಮಾರ್ ಹೇಳಿದರು.

ಅವರು ಬಿಜೆಪಿ ಮಹಿಳಾ ಮೋರ್ಚಾ ಕಾರ್ಕಳ ಹಾಗೂ ಹೆಬ್ರಿ ಶಕ್ತಿ ಕೇಂದ್ರದ ನೇತೃತ್ವದಲ್ಲಿ ಮುದ್ರಾಡಿ ಬಸ್ ತಂಗುದಾಣ ವಠಾರದಲ್ಲಿ ನಡೆದ ಹೊಸ ಮದ್ಯದಂಗಡಿಗೆ ಅನುಮತಿ ನೀಡುವ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

“ರಾಜ್ಯ ಸರಕಾರ ರೈತರಿಗೆ ಅಗತ್ಯವಿರುವ ರೇಷನ್ ಕಾರ್ಡ್ ಹಾಗೂ ಇತರ ಮೂಲ ಸೌಲಭ್ಯವನ್ನು ನೀಡುವುದನ್ನು ಬಿಟ್ಟು ಸರಕಾರವೇ ನಡೆಸುವಂತಹ ಮದ್ಯದಂಗಡಿಗೆ ಪರವಾನಿಗೆ ನೀಡಿ ಮಹಿಳೆಯರನ್ನು ಬೀದಿಗೆ ತಳ್ಳುತ್ತಿದೆ” ಎಂದು ಬಿಜೆಪಿ ರೈತ ಮೋರ್ಚಾದ ಉಡುಪಿ ಜಿಲ್ಲಾಧ್ಯಕ್ಷ ಮುಟ್ಲುಪಾಡಿ ಸತೀಶ್ ಶೆಟ್ಟಿ ಹೇಳಿದರು.