ವಕೀಲ ಕೊಲೆಯತ್ನ ಖಂಡಿಸಿ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಕಾರ್ಕಳ ಬಾರ್ ಅಸೋಸಿಯೇಷನ್ ಅಧ್ಯಕ್ಷ ಹಿರಿಯ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ ಮೇಲೆ ನಡೆದ ಕೊಲೆಯತ್ನ ಖಂಡಿಸಿ ಬಾರ್ ಅಸೋಸಿಯೇಷನ್ ಮುಂಭಾಗ ವಕೀಲರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಹಿರಿಯ ವಕೀಲ ಎಂ ಕೆ ವಿಜಯಕುಮಾರ್ ಮಾತನಾಡಿ, “ನ್ಯಾಯವಾದಿಗಳು ನ್ಯಾಯಾಂಗದ ಒಂದು ಅಂಗ, ನ್ಯಾಯದ ಪರಿಪಾಲನೆಗಾಗಿ ಮುಂದಾಗುವ ಸಂದರ್ಭ ಅವರ ಮೇಲೆ ಕಾನೂನು ಬಾಹಿರ ಕೃತ್ಯಗಳನ್ನು ಎಸಗುತ್ತಿರುವುದು ಖೇದಕರ. ನ್ಯಾಯಾಲಯದ ಆಯುಕ್ತ ವಿಶಾಲ್ ಅವರ ಜತೆ, ಕಾರ್ಕಳದ ಬಾಲಕೃಷ್ಣ ಶೆಟ್ಟಿ ಅವರು ಸರ್ವೇಯರ್ ಮೂಲಕ ತೆಂಕಮಿಜಾರಿಗೆ ತೆರಳಿದ ಸಂದರ್ಭ ತಲವಾರಿನಿಂದ ಕೊಲೆ ಯತ್ನಕ್ಕೆ ಮುಂದಾಗಿದ್ದು ಖಂಡನೀಯ. ನನ್ನ ವಕೀಲ ವೃತ್ತಿ ಜೀವನದ ಐವತ್ತು ವರ್ಷಗಳಲ್ಲಿ ಇಂತಹ ಘಟನೆ ಎಂದೂ ನಡೆದಿಲ್ಲ. ಪೊಲೀಸ್ ಇಲಾಖೆ ಈ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾಗಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದರು.

ಪ್ರತಿಭಟನೆ ಪ್ರಯುಕ್ತ ನ್ಯಾಯವಾದಿಗಳು ಕೆಂಪು ಪಟ್ಟಿ ಧರಿಸಿ ನ್ಯಾಯಾಲಯಕ್ಕೆ ಹಾಜರಾಗುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

LEAVE A REPLY