ಮರಾಠಿ ಸಮುದಾಯಕ್ಕೆ ಅನ್ಯಾಯ ಖಂಡಿಸಿ ಎಣ್ಮಕಜೆ ಪಂ ಎದುರು ಧರಣಿ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಅತೀ ಹೆಚ್ಚು ಮರಾಠಿ (ಎಸ್ಟಿ) ಜನಸಂಖ್ಯೆ ಇರುವ ಎಣ್ಮಕಜೆ ಗ್ರಾಮ ಪಂಚಾಯತಿನಲ್ಲಿ ಪರಿಶಿಷ್ಠ ವರ್ಗದ ಅಭಿವೃದ್ಧಿಗಾಗಿ ಬಳಸಲಾಗುತ್ತಿರುವ ಟಿಎಸ್ಟಿ ಫಂಡ್ ಕೇವಲ 5.9 ಲಕ್ಷದಷ್ಟು ಮಾತ್ರ ಲಭ್ಯವಾಗಿರುವುದಕ್ಕೆ ಪಂಚಾಯತಿ ಆಡಳಿತ ಸಮಿತಿ ಅನಾಸ್ಥೆಯೇ ಕಾರಣ. ಇದು ಎಸ್ಟಿಯವರಿಗೆ ಮಾಡಲಾದ ಅನ್ಯಾಯ. ಇದರ ಸಂಪೂರ್ಣ ಹೊಣೆ ಪಂಚಾಯತಿ ಆಡಳಿತ ಸಮಿತಿ ಹೊರಬೇಕೆಂದು ಎಣ್ಮಕಜೆ ಪಂಚಾಯತ್ ಯುಡಿಎಫ್ ಸಭೆ ಆರೋಪಿಸಿದೆ.

“ಎಸ್ಟಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಮೀಸಲಾದ ಟಿಎಸ್ಪಿ ಫಂಡ್ ಕೈತಪ್ಪಲು ಹಿಂದಿನ ಆಡಳಿತ ಸಮಿತಿ ಕಾರಣ ಎಂಬ ಹಾಲಿ ಪಂಚಾಯತು ಅಧ್ಯಕ್ಷೆಯ ಹೇಳಿಕೆ ನಿರಾಧಾರ. ಆಡಳಿತ ಜವಾಬ್ದಾರಿ ಹೊಲು ಸಾಧ್ಯವಾಗದ ಪಂ ಅಧ್ಯಕ್ಷೆ ತನ್ನ ವೈಫಲ್ಯ ಮರೆಮಾಚಲು ನಡೆಸುವ ಮಾತಿನ ಕಸರತ್ತು ಈ ಆರೋಪ. ಎಸ್ಟಿ ವಿಭಾಗದ ಅಕ್ರೋಶಕ್ಕೆ ಗುರಿಯಾದ ಪಂಚಾಯತಿ ಆಡಳಿದ ವಿರುದ್ಧ ಪ್ರತಿಪಕ್ಷಗಳು ತೀವ್ರ ಪ್ರತಿಭಟನೆಗೆ ಸಜ್ಜಾಗುತ್ತಿದ್ದಂತೆ ಅಧಿಕಾರದ ಅಸ್ತಿತ್ವ ಉಳಿಸಲು ಅಪಪ್ರಚಾರ ನಡೆಸುವ ಪಂಚಾಯತು ಆಡಳಿತ ಸಂಪೂರ್ಣ ನಿಷ್ಕ್ರೀಯಗೊಂಡಿದೆ” ಎಂದು ಸಭೆ ಆರೋಪಿಸಿದೆ.

ಎಸ್ಟಿ ಸಮುದಾಯಕ್ಕೆ ಆದ ಅನ್ಯಾಯದ ವಿರುದ್ಧ ತೀವ್ರ ಹೋರಾಟದ ಭಾಗವಾಗಿ ಎಣ್ಮಕಜೆ ಪಂಚಾಯತ್ ಮುಂದೆ ಯುಡಿಎಫ್ ಮರಾಠಿ ಸಮುದಾಯದವರನ್ನು ಸೇರಿಸಿ ಗುರುವಾರ ಧರಣಿ ನಡೆಸಲಾಯಿತು. ಈ ಸಂದರ್ಭ ಜನಪ್ರತಿನಿಧಿಗಳ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.