ನವಗ್ರಾಮದ ನೀರು ಬೇರೆಡೆ ಸಾಗಿಸಿದ ಗ್ರಾ ಪಂ ಅಧ್ಯಕ್ಷರ ವಿರುದ್ಧ ಪ್ರತಿಭಟನೆ

ಟ್ತಾಂಕ್ ಮುಂದೆ ನೀರು ವಂಚಿದ ಬಡ ಕುಟುಂಬಗಳು

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಪೆರುವಾಯಿ ನವಗ್ರಾಮದ 27 ಬಡ ಕುಟುಂಬಗಳ ಕುಡಿಯುವ ನೀರಿನ ವ್ಯವಸ್ಥೆಗಾಗಿ ಕೊಳೆವೆ ಬಾವಿ ಕೊರೆಸಿದ್ದರೂ ಪಂಚಾಯತ್ ಅಧ್ಯಕ್ಷರು ನೀರನ್ನು ಬೇರೆಡೆಗೆ ಸಾಗಿಸುವ ಮೂಲಕ ತಮಗೆ ವಂಚಿಸಿದ್ದಾರೆಂದು ಜನ ಆರೋಪಿಸಿದ್ದಾರೆ.

ಪೆರುವಾಯಿ ಗ್ರಾ ಪಂ ವ್ಯಾಪ್ತಿಯ ಮುಚ್ಚಿರಪದವು ನವಗ್ರಾಮದಲ್ಲಿ ತೀರಾ ಬಡ ಕುಟುಂಬಗಳು ವಾಸಿಸುತ್ತಿದ್ದು ಈವರೆಗೂ ಪ್ರತ್ಯೇಕ ನೀರಿನ ಸಂಪರ್ಕ ಒದಗಿಸಲು ಸ್ಥಳೀಯ ಗ್ರಾ ಪಂ.ಗೆ ಸಾಧ್ಯವಾಗಿಲ್ಲವೆಂದು ಇಲ್ಲಿನ ಜನ ಆರೋಪಿಸಿದ್ದಾರೆ. ಕಳೆದೆರಡು ವರ್ಷಗಳ ಹಿಂದೆ ಇಲ್ಲಿನ ನೀರಿನ ವ್ಯವಸ್ಥೆಗಾಗಿ ಕೊರೆದಿದ್ದ ಕೊಳವೆ ಬಾವಿ ಅಳಿಕೆ ಗ್ರಾ ಪಂ ವ್ಯಾಪ್ತಿಗೆ ಸೇರಿತ್ತೆಂಬ ಕಾರಣಕ್ಕಾಗಿ ವಿವಾದ ಹುಟ್ಟಿಕೊಂಡಿತ್ತು. ಬಳಿಕ ನವಗ್ರಾಮಕ್ಕೆ ನೀರಿನ ವ್ಯವಸ್ಥೆ ಮಾಡುವ ಸಲುವಾಗಿ ಎರಡು ಗ್ರಾ ಪಂ.ಗಳು ಮಾತುಕತೆ ನಡೆಸಿ ವಿವಾದವನ್ನು ಬಗೆಹರಿಸಿಕೊಂಡಿದ್ದವು. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಪೆರುವಾಯಿ ಗ್ರಾ ಪಂ ಅಧ್ಯಕ್ಷರು  ನವಗ್ರಾಮದ ನಿವಾಸಿಗಳಿಗೆ ನೀರು ಒದಗಿಸುವ ಬದಲಾಗಿ ಪೆರುವಾಯಿ ಪೇಟೆಯ ಕೆಲವೊಂದು ಕಡೆಗಳಿಗೆ ನೀರು ಸರಬರಾಜು ಮಾಡುತ್ತಿದ್ದಾರೆಂದು ಇಲ್ಲಿನ ಜನ ಆರೋಪಿಸಿದ್ದಾರೆ.

ನವಗ್ರಾಮದ ಬಡ ಕುಟುಂಬಗಳು ಕಳೆದ ಮೂರ್ನಾಲ್ಕು ದಿನಗಳಿಂದ ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ. ಅಧ್ಯಕ್ಷರ ಒಡೆದು ಆಳುವ ನೀತಿಯಿಂದ ರೊಚ್ಚಿಗೆದ್ದ ಬಡ ಕುಟುಂಬಗಳು ಸೋಮವಾರ ಸಮಸ್ಯೆ ಬಗೆಹರಿಸದಿದ್ದಲ್ಲಿ ಮಂಗಳವಾರದಂದು ಪೆರುವಾಯಿ ಗ್ರಾ ಪಂ ಮುಂದೆ ಪ್ರತಿಭಟನೆ ನಡೆಸಲು ಸಿದ್ದತೆ ನಡೆಸಿವೆ. ರವಿವಾರ ಸಂಜೆ ನವಗ್ರಾಮದ ಬಡ ಕುಟುಂಬಗಳು ಮಾಧ್ಯಮದವರನ್ನು ಸ್ಥಳಕ್ಕೆ ಕರೆಯಿಸಿ ಗ್ರಾ ಪಂ ಅಧ್ಯಕ್ಷರ ಅಮಾನವೀಯ ಕ್ರಮದ ವಿರುದ್ಧ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.