ಶಂಕಿತ ಮಾವೋವಾದಿಗಳಿಬ್ಬರ `ನಕಲಿ’ ಎನ್ಕೌಂಟರ್ : ತೀವ್ರಗೊಂಡ ಪ್ರತಿಭಟನೆ

ಕೋಝಿಕ್ಕೋಡ್ : ಪೊಲೀಸ್ ಎನ್‍ಕೌಂಟರಿನಲ್ಲಿ ಸಾವಿಗೀಡಾದ `ಮಾವೋವೋದಿ’ಗಳಾದ ಕುಪ್ಪು ದೇವರಾಜ್ ಮತ್ತು ಅಜಿತ್ ಮರಣೊತ್ತರ ಪರೀಕ್ಷೆ ನಡೆದ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆವರಣದಲ್ಲಿ ಕಾರ್ಯಕರ್ತರು, ಇದೊಂದು ನಕಲಿ ಎನ್‍ಕೌಂಟರೆಂದು ಆರೋಪಿಸಿ ಭಾರೀ ಪ್ರತಿಭಟನೆ ನಡೆಸಿದರು.

ಗುರುವಾರದಂದು ಕರುಲಾಯಿ ಅರಣ್ಯದ ನೀಲಾಂಬರ್‍ನಲ್ಲಿ `ಥಂಡರ್‍ಬೋಲ್ಟ್’ ವಿಶೇಷ ಪೊಲೀಸ್ ಪಡೆಯಿಂದ ಕುಪ್ಪು ಮತ್ತು ಅಜಿತ್ ಎನ್ಕೌಂಟರ್ ನಡೆದಿದ್ದು, ಘಟನಾ ಸ್ಥಳದಿಂದ ಬರೇ ಒಂದು ಪಿಸ್ತೂಲ್ ವಶಪಡಿಸಿಕೊಳ್ಳಲಾಗಿತ್ತು.

ಈ ಘಟನೆಯಲ್ಲಿ ಯಾವೊಬ್ಬ ಪೊಲೀಸ್ ಗಾಯಗೊಂಡಿಲ್ಲ. ಘಟನೆ ನಡೆದ 24 ತಾಸು ಕಳೆದರೂ ಹತರಾದ ಮಾವೋಗಳ ಶವವನ್ನು ಮಾಧ್ಯಮಗಳೆದುರು ಪ್ರದರ್ಶಿಸಲು ಪೊಲೀಸರು ನಿರಾಕರಿಸಿದ್ದಾರೆ. ಪರಿಣಾಮ, ಎಲ್ ಡಿ ಎಫ್ ನೇತೃತ್ವದ ಸರ್ಕಾರ ಮತ್ತು ಪೊಲೀಸ್ ವಿರುದ್ಧ ಕಾರ್ಯಕರ್ತರ ಸಂದೇಹ ಮತ್ತು ಆರೋಪ ಪ್ರಬಲಗೊಂಡಿದೆ.

ಜನರ ಏಳಿಗೆಗೆ ಕೆಲಸ ಮಾಡುವವರ ವಿರುದ್ಧ ಭಯೋತ್ಪಾದನಾ ಹಣೆಪಟ್ಟಿ ಕಟ್ಟಿರುವ ಈ ಸರ್ಕಾರ, ಅಂತಹವರನ್ನೇ ಗುರಿಯನ್ನಾಗಿಸಿಕೊಂಡಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಕನಂ ರಾಜೇಂದ್ರ ಆರೋಪಿಸಿದರು.

ಎನ್ಕೌಂಟರ್ ಸ್ಥಳದಲ್ಲಿ ಮ್ಯಾಜಿಸ್ಟ್ರೇಟರರ ಬದಲಿಗೆ ತಹಶೀಲ್ದಾರ್ ಸಮಕ್ಷಮದಲ್ಲಿ ಪಂಚನಾಮೆ ನಡೆಸಿರುವ ಕ್ರಮಕ್ಕೆ ಪ್ರತಿಭಟನಕಾರ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಇದೊಂದು ನಕಲಿ ಎನ್ಕೌಂಟರ್. ಕೆಲವು ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಹಿರಿಯ ಸಹೋದರ ಜನರಿಗಾಗಿ ತನ್ನನ್ನು ಮುಡಿಪಾಗಿಟ್ಟಿದ್ದ” ಎಂದು ಕುಪ್ಪು ಸಹೋದರ ಬಾಬು ಸುದ್ದಿಗಾರರಲ್ಲಿ ತಿಳಿಸಿದರು.

“ಮ್ಯಾಜಿಸ್ಟ್ರೇಟರ್ ಉಪಸ್ಥಿತಿಯಲ್ಲಿ ಪಂಚನಾಮೆ ನಡೆಸಬೇಕಿತ್ತು. ಆದ್ದರಿಂದ ಎನ್‍ಕೌಂಟರ್ ನೈಜತೆ ಸವಾಲಿನದ್ದಾಗಿದೆ. ಅಜಿತ್ ಮತ್ತ ದೇವರಾಜ್ ಶವ ನೋಡಲು ಅನುಮತಿ ನೀಡುವುದೆಂದು ಪೊಲೀಸರು ಮೊದಲಿಗೆ ಹೇಳಿದ್ದರೂ ನಂತರ, ನಿರಾಕರಿಸಿದ್ದರು” ಎಂದು ಜನಕೀಯ ಮನುಷ್ಯವಕಶ ಪ್ರಸ್ಥಾನಂ (ಜೆಎಂಪಿ) ಅಧ್ಯಕ್ಷ ಸಿಪಿ ರಶೀದ್ ಹೇಳಿದರು.

“ರಾಜಕೀಯ ಅನುಮತಿ ಪಡೆದು ಅತಿ ಎಚ್ಚರಿಕೆಯ ಯೋಜನೆಯೊಂದಿಗೆ ನಡೆದಿರುವ ಎನ್‍ಕೌಂಟರ್ ಇದಾಗಿದೆ. ಪಿನರಾಯಿ ವಿಜಯನ್ ಕೈಗಳು ರಕ್ತಸಿಕ್ತವಾಗಿದೆ. ಇಲ್ಲಿ ಪೊಲೀಸ್ ಕಿರುಕುಳ ಮತ್ತು ಕಾರ್ಯಕರ್ತರ ವಿರುದ್ಧ ಯುಎಪಿಎ ಹೇರುವುದು ಸಾಮಾನ್ಯವಾಗಿಬಿಟ್ಟಿದೆ” ಎಂದು ಕಾರ್ಯಕರ್ತ ರಶೀದ್ ಆರೋಪಿಸಿದರು.