ಬಡ ಕುಟಂಬದ ಮನೆ ನೆಲಸಮ ಮಾಡಿದ್ದು ವಿರೋಧಿಸಿ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಬಡ ಕುಟಂಬದ ಮನೆಯನ್ನು ವಿಟ್ಲ ಪಟ್ಟಣ ಪಂ ಅಧಿಕಾರಿಗಳು ನೆಲಸಮ ಮಾಡಿರುವ ಕ್ರಮ ವಿರೋಧಿಸಿ ಪಂ ಕಚೇರಿ ಮುಂದೆ ಜನಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.ವಿಟ್ಲ ಕಸಬಾ ಗ್ರಾಮದ ಇರಂದೂರಿನಲ್ಲಿ ಹಲವು ವರ್ಷಗಳಿಂದ ಸರಕಾರಿ ಜಮೀನಿನಲ್ಲಿ ಬದುಕುತ್ತಿದ್ದ ವಾದಿರಾಜ ಕುಟುಂಬ ಅಧಿಕಾರಿಗಳ ಕೃತ್ಯದಿಂದ ಬೀದಿಪಾಲಾಗಿದೆ. ಇದೇ 9ರಂದು ಸಂಜೆ ವಿಟ್ಲ ಪ ಪಂ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ಮನೆಯವರಿಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಮನೆಯನ್ನು ತೆರವುಗೊಳಿಸಿದ್ದಾರೆ. ಅಧಿಕಾರಿಗಳ ಕೃತ್ಯದಿಂದ ಆಕ್ರೋಶಗೊಂಡ ಜನಪರ ಸಂಘಟನೆಗಳು ಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿವೆ. ಈ ಸಂದರ್ಭ ವಿಟ್ಲ ಗ್ರಾ ಪಂ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ ಮಾತನಾಡುತ್ತಾ, “ಯಾವುದೇ ಮಾಹಿತಿ ನೀಡದೆ ಮನೆ ಧ್ವಂಸ ಮಾಡಿದ್ದರಿಂದ ಬಡ ಕುಟುಂಬ ಬೀದಿಪಾಲಾಗಿದ್ದು ಮರದಡಿಯಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಬದಲಿ ವ್ಯವಸ್ಥೆ ಕಲ್ಪಿಸದೆ ಮನೆಯನ್ನು ನೆಲಸಮ ಮಾಡುವ ಮೂಲಕ ಅಧಿಕಾರಿಗಳು ಹೃದಯ ಶೂನ್ಯರೆಂಬುದನ್ನು ಸಾಬೀತುಪಡಿಸಿದ್ದಾರೆ. ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರುವ ಅಧಿಕಾರಿಗಳ ವಿರುದ್ಧ ಸಂಬಂಧಪಟ್ಟ ಇಲಾಖೆಗೆ ದೂರು ನೀಡುತ್ತೇವೆ” ಎಂದು ಹೇಳಿದರು.

ಸಿಐಟಿಯು ಮುಖಂಡ ರಾಮಣ್ಣ ವಿಟ್ಲ ಮಾತನಾಡುತ್ತಾ, “ಅಧಿಕಾರಿಗಳ ಅಮಾನವೀಯ ವರ್ತನೆಯಿಂದಾಗಿ ವಾದಿರಾಜರ ಕುಟುಂಬ ಬೀದಿಪಾಲಾಗಿದ್ದು, ವಿದ್ಯಾಭ್ಯಾಸ ಮಾಡುತ್ತಿರುವ ನಾಲ್ವರು ಮಕ್ಕಳು ಅತಂತ್ರವಾಗಿದ್ದಾರೆ. ಕೂಲಿ ಕೆಲಸ ಮಾಡಿ ತನ್ನ ಕುಟುಂಬವನ್ನು ಸಾಕುತ್ತಿರುವ ಮನೆ ಮಾಲಿಕರಿಗೆ 2 ಲಕ್ಷ ರೂ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದರು.

ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು, ವಿಟ್ಲ ಪಟ್ಟಣ ಪಂಚಾಯಿತಿ ವಿಪಕ್ಷ ನಾಯಕ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿದರು. ಪ್ರತಿಭಟನಾಕಾರರಿಮದ ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಮಾತನಾಡಿ, “ನಾವು ತಹಶೀಲ್ದಾರರ ಆದೇಶದಂತೆ ಮನೆಯನ್ನು ತೆರವುಗೊಳಿಸಿದ್ದೇವೆ” ಎಂದು ಹೇಳಿದರು. ಘಟನೆಯ ಬಗ್ಗೆ ಸದಸ್ಯರ ಸಭೆ ಕರೆದು ಮಾತುಕತೆ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದರು.

 

LEAVE A REPLY