ಮಾಜಿ ಸೈನಿಕರ ಬೇಡಿಕೆ ಆಲಿಸದ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ

ಬೆಂಗಳೂರು : ಸರ್ಕಾರದ ಆಹ್ವಾನದ ಮೇರೆಗೆ ಬ್ರಿಗೇಡ್ ರೋಡ್ ಜಂಕ್ಷನಿನಲ್ಲಿ ನವೀಕರಣಗೊಂಡಿರುವ `ವಾರ್ ಮೊಮೋರಿಯಲ್’ ಬಳಿ ಸಭೆ ಸೇರಿದ್ದ ಸುಮಾರು 50ರಷ್ಟು ಪ್ರಸಿದ್ಧ ಮಾಜಿ ಸೈನಿಕರು ಸೀಎಂ ಸಿದ್ದರಾಮಯ್ಯದ ಉದಾಸೀನದ ನೀತಿ ವಿರೋಧಿಸಿ ಪ್ರತಿಭಟಿಸಿದ್ದಾರೆ.

“ಸಿದ್ದರಾಮಯ್ಯ ಈ ಕಾರ್ಯಕ್ರಮಕ್ಕೆ 45 ನಿಮಿಷ ತಡವಾಗಿ ಆಗಮಿಸಿದ್ದರು. ಸಾಕಷ್ಟು ಕಾದ ಬಳಿಕ ಸೀಎಂ ಆಗಮಿಸಿದರೂ ನಮ್ಮ ಬೇಡಿಕೆಗಳ ಬಗ್ಗೆ ಕೇಳಲೇ ಇಲ್ಲ” ಎಂದು ಮಾಜಿ ಸೈನಿಕರೊಬ್ಬರು ದೂರಿದರು.

“ಸಾಕಷ್ಟು ಕಾದರೂ ಸೀಎಂ ನಮ್ಮ ಬೇಡಿಕೆಗಳನ್ನು ಆಲಿಸದೆ ಬರೇ ರಾಜಕೀಯ ಭಾಷಣ ಮಾಡಿದರು. ಸಭೆಯಲ್ಲಿದ್ದ ಉಳಿದ ನಾಯಕರೂ ಕಾಂಗ್ರೆಸ್ ಸರ್ಕಾರದ ನಾಲ್ಕು ವರ್ಷಗಳ ಸಾಧನೆ ಬಗ್ಗೆ ಕೊರೆದರು. ಯಾರೊಬ್ಬರೂ ನಮ್ಮ ಸಮಸ್ಯೆಗಳ ಬಗ್ಗೆ ಮಾತಾಡಿಲ್ಲ” ಎಂದವರು ಸುದ್ದಿಗಾರರಲ್ಲಿ ಹೇಳಿದರು.

“ನಾವು ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಇಲ್ಲ. ನಮ್ಮ ಕಂದುಕೊರತೆ ಆಲಿಸಲಾಗುವುದೆಂದು ಸೀಎಂ ಭರವಸೆ ನೀಡಿದ್ದರಿಂದ ನಾವಿಲ್ಲಿ ಜಮಾಯಿಸಿದ್ದೇವೆ. ಆದರೆ ಸಿದ್ದರಾಮಯ್ಯ ಇದನ್ನೆಲ್ಲ ಬಿಟ್ಟು ರಾಜಕೀಯ ಭಾಷಣ ಮಾಡಿದ್ದಾರೆ” ಎಂದು ಮಾಜಿ ಸೈನಿಕ ಶೆಲ್ಲಿ ವಿಷಾದಿಸಿದರು.

ಮಾಜಿ ಸೈನಿಕರು ಪ್ರತಿಭಟನೆ ನಡೆಸಿ ಸಭೆಯಿಂದ ಹೊರನಡೆಯುವ ಹೊತ್ತಿಗೆ ಸಿದ್ದರಾಮಯ್ಯ ರೈತರು ಮತ್ತು ಸೈನಿಕರನ್ನು ಹೊಗಳಿದರು.

ಇಲ್ಲಿ ಸೇರಿರುವ ಮಾಜಿ ಸೈನಿಕರು ಬಿಜೆಪಿ ಅಧಿಕಾರದಲ್ಲಿರದ ರಾಜ್ಯಗಳಲ್ಲಿ ಮಾತ್ರ ಈ ರೀತಿ ಪ್ರತಿಭಟನೆ ನಡೆಸುತ್ತಾರೆ ಎಂದು ಕೆಲವು ಕಾಂಗ್ರೆಸ್ಸಿಗರು ಆಪಾದಿಸಿದರು.