ಕೇಂದ್ರ ನೋಟು ಗೊಂದಲ ವಿರುದ್ಧ ಪೋಸ್ಟಾಫೀಸ್ ಎದುರು ಪ್ರತಿಭಟನೆ

ಪ್ರತಿಭಟನೆಗೆ ಮೊದಲು ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕಪ್ಪು ಹಣ ನಿಯಂತ್ರಣಕ್ಕೆ ಮೋದಿ ನೇತೃತ್ವದ ಕೇಂದ್ರ ಸರಕಾರ ಕೈಗೊಂಡ ಅವ್ಯವಸ್ಥಿತ ಕ್ರಮಗಳು ಜನಸಾಮಾನ್ಯರನ್ನು ಕಂಗೆಡಿಸಿದೆ. ಹಲವಾರು ಅತ್ಯಾವಶ್ಯಕ ವ್ಯವಹಾರಗಳು ನಿಂತಿರುವುದರಿಂದ ಗ್ರಾಮೀಣ ಪ್ರದೇಶಗಳ ಸಹಿತ ಎಲ್ಲೆಡೆ ತೀವ್ರ ಸಮಸ್ಯೆ ತಲೆದೋರಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ ಎಂದು ಕುಂಬಳೆ ಬ್ಲಾಕ್ ಕಾಂಗ್ರೆಸ್ಸ್ ಅಧ್ಯಕ್ಷ ಕೆ ಸಾಮಿಕುಟ್ಟಿ ಹೇಳಿದ್ದಾರೆ.

ಕೇಂದ್ರ ಸರಕಾರದ ಅವ್ಯವಸ್ಥಿತ ಆರ್ಥಿಕ ನಿಯಂತ್ರಣ ಮತ್ತು ತತ್ಸಂಬಧಿ ಗೊಂದಲಗಳನ್ನು ಖಂಡಿಸಿ ಕುಂಬಳೆ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ ಕುಂಬಳೆಯ ಪ್ರಧಾನ ಅಂಚೆಕಚೇರಿ ಎದುರು ನಡೆಸಿದ ಪ್ರತಿಭಟನೆ, ದಿಗ್ಬಂಧನೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕರೆನ್ಸಿಗಳನ್ನು ಹಿಂಪಡೆಯುವ ನಿರ್ಧಾರಗಳ ಹಿಂದೆ ಯಾವುದೇ ಮುಂದಾಲೋಚನಾ ಕ್ರಮಗಳಿಲ್ಲದೆ ಎದುರಾಗಿರುವ ಜಟಿಲತೆಯನ್ನು ನಿಭಾಯಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ಸೋತಿದೆಯೆಂದು ತಿಳಿಸಿದ ಅವರು, ಬ್ಯಾಂಕಿಂಗ್ ವ್ಯವಸ್ಥೆ ಹದಗೆಟ್ಟ ಬಗ್ಗೆ ಖೇದ ವ್ಯಕ್ತಪಡಿಸಿದರು. ವ್ಯಾಪಾರ ವಹಿವಾಟುಗಳು ಕುಸಿತ ಕಂಡಿದ್ದು, ಸರಿಯಾದ ಪ್ರಮಾಣದಲ್ಲಿ ಚಿಲ್ಲರೆ ವ್ಯವಸ್ಥೆಯನ್ನು ಕಲ್ಪಿಸದಿರುವ ಕೇಂದ್ರ ಸರಕಾರದ ನಡೆ ಖಂಡನೀಯವೆಂದು ತಿಳಿಸಿದರು.

ನೇತಾರರ ಸಹಿತ ಹಲವಾರು ಮಂದಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.