ಪ್ರಸ್ತಾವಿತ ಜಿ ಎಸ್ ಟಿ ಎಫೆಕ್ಟ್ : ಅಡಿಕೆ ಧಾರಣೆ, ಬೇಡಿಕೆ ಕುಸಿತ

ಶಿವಮೊಗ್ಗ : ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗುವ ಹಿನ್ನೆಲೆಯಲ್ಲಿ ಅಡಿಕೆ ಧಾರಣೆಯಲ್ಲಿ ಕುಸಿತ ಕಂಡು ಬಂದಿದೆ. ಎಪ್ರಿಲ್ ಎರಡನೇ ವಾರದಲ್ಲಿ ರಾಶಿ ಅಡಿಕೆ ಬಲೆ ಕ್ವಿಂಟಾಲಿಗೆ ರೂ 55,000 ಇದ್ದರೆ ಈಗ ಅದರ ಬೆಲೆ ಶೇ 34ರಷ್ಟು ಕುಸಿತ ಕಂಡು ಬಂದಿದ್ದು ರೂ 37,000 ಆಗಿದೆ. ಅಂತೆಯೇ ಸರಕು, ಬೆಟ್ಟೆ ಹಾಗೂ ಗೊರಬೊಲು ಅಡಿಕೆಯ ಬೆಲೆಗಳೂ ಇಳಿಕೆಯಾಗಿವೆ.

ಅಡಿಕೆಯಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಉತ್ತರ ಭಾರತದ ಹಲವು ಕಂಪೆನಿಗಳು ಇತ್ತೀಚಿಗಿನ ದಿನಗಳಲ್ಲಿ ಸ್ಥಳೀಯ ವರ್ತಕರಿಂದ ಅಡಿಕೆ ಖರೀದಿಸುವುದನ್ನು ನಿಲ್ಲಿಸಿರುವುದರಿಂದ ಅಡಿಕೆಗೆ ಬೇಡಿಕೆಯೂ ಕಡಿಮೆಯಾಗಿ ದರವೂ ಇಳಿಕೆಗೊಂಡಿದೆ ಎನ್ನುತ್ತವೆ ಮೂಲಗಳು. ಡಿಸೆಂಬರ್ 2016 ಹಾಗೂ ಫೆಬ್ರವರಿ 2017ರ ಅವಧಿಯಲ್ಲಿ ಅಡಿಕೆ ಬೆಲೆ ಕ್ವಿಂಟಾಲಿಗೆ ರೂ 25,000ರಷ್ಟಿದ್ದಾಗ ಈ ಕಂಪೆನಿಗಳು ಭಾರೀ ಪ್ರಮಾಣದಲ್ಲಿ ಖರೀದಿಸಿರುವುದರಿಂದ ಈಗ ಅವುಗಳ ಬಳಿ ಸಾಕಷ್ಟು ಅಡಿಕೆ ಶೇಖರಣೆಗೊಂಡಿದೆಯೆನ್ನಲಾಗುತ್ತಿದೆ. ವ್ಯಾಟ್ ಮತ್ತಿತರ ತೆರಿಗೆಗಳನ್ನು ತಪ್ಪಿಸಲು ಹೆಚ್ಚಿನ ಅಡಿಕೆ ವಹಿವಾಟು ಅನಧಿಕೃತ ವಿತರಕರ ಮೂಲಕ ಜರುಗುವುದರಿಂದ ಹೀಗೆ ಖರೀದಿಸಲಾದ ಅಡಿಕೆಯನ್ನು ಜಿಎಸ್ಟಿ ಜಾರಿಗೆ ಮುನ್ನ ವಿಲೇವಾರಿ ಮಾಡುವುದೇ ಈಗ ಸಂಬಂಧಿತ ಕಂಪೆನಿಗಳ ಪ್ರಮುಖ ಧ್ಯೇಯವಾಗಿ ಬಿಟ್ಟಿದೆ.

ಜಿಎಸ್ಟಿ ಜಾರಿಗೊಂಡಾಗ ಉತ್ಪಾದಕರ ಬಳಿ ಆಗ ಇರುವ ಅಡಿಕೆ ಪ್ರಮಾಣದ ಬಗ್ಗೆಯೂ ಮಾಹಿತಿ ನೀಡಬೇಕಾಗಬಹುದೆಂಬ ಭಯವೂ ಉತ್ಪಾದಕರಿಗಿದೆ ಎನ್ನಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಶಿವಮೊಗ್ಗ ಎಪಿಎಂಸಿಗೆ ಪೂರೈಕೆಯಾಗುವ ಅಡಿಕೆ ಪ್ರಮಾಣ ದಿನವೊಂದಕ್ಕೆ 50 ಕ್ವಿಂಟಾಲಿನಿಂದ 10 ಕ್ವಿಂಟಾಲಿಗಿಳಿದಿದೆ.