ಮೇಯರುಗಳ ತೆವಲುಗಳು

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ವರ್ಷಕ್ಕೊಬ್ಬ ಮೇಯರ್ ಆಯ್ಕೆಯಾಗುತ್ತಾರೆ. ಮೇಯರ್ ಆದ ತಕ್ಷಣ ಮಂಗಳೂರನ್ನು ಸುಂದರ ಗೊಳಿಸುತ್ತೇವೆ ಎಂದು ಬೊಗಳೆ ಹೊಡೆದವರೇ ಹೆಚ್ಚು. ಮಂಗಳೂರು ಯಾವ ರೀತಿಯಲ್ಲೂ ಬದಲಾವಣೆ ಹೊಂದಲಿಲ್ಲ. ಹೋಗಲಿ ಬಿಡಿ. ಆದರೆ ಇನ್ನೂ ಕೆಲವು ಮೇಯರುಗಳಿಗೆ ತನ್ನ ಅವಧಿಯಲ್ಲಿ ಏನಾದರೊಂದು ವಿಶಿಷ್ಟವಾದುದನ್ನು ಮಾಡಬೇಕೆಂಬ ತೆವಲು. ತೆವಲು ತೀರಿಕೆಯ ಕೆಲವು ಉದಾಹರಣೆಗಳನ್ನು ಗಮನಿಸಬಹುದು ಮಂಗಳೂರಿನ ಪುರಭವನ ಗಟ್ಟಿಮುಟ್ಟಾಗಿ ಬಳಕೆಗೆ ಯೋಗ್ಯವಿದ್ದರೂ, ಅದಕ್ಕೆ 50 ವರ್ಷ ತುಂಬಿದೆ ಎಂಬ ನೆಪದಲ್ಲಿ ನವೀಕರಣ ಮಾಡಲಾಯಿತು. ಬರೋಬ್ಬರಿ ಐದು ಕೋಟಿ ರೂ ಖರ್ಚಾಯಿತು. ಈಗ ಪುರಭವನ ಹೇಗಿದೆ ಅಂದರೆ, ಅಲ್ಲಿನ ಕಾರ್ಯಕ್ರಮ ನೋಡಲು ಹೋಗಿ ಸಭೆಯಲ್ಲಿ ಕುಳಿತವರು, ಇದೊಂದು ಎಂಥಾ ಹಿಂಸೆಯಪ್ಪಾ ಎಂದು ಗೊಣಗುತ್ತಿರುತ್ತಾರೆ. ಆಸನದಲ್ಲಿ ಕುಳಿತವನನ್ನು ದಾಟಿ ಮುಂದೆ ಹೋಗುವುದು ಅಧ್ವಾನವಾಗುವ ರೀತಿಯಲ್ಲಿ ಇಲ್ಲಿ ಆಸನ ಜೋಡಣೆ ನಡೆದಿದೆ ಇನ್ನೊಂದು ಉದಾಹರಣೆ ಲಾಲಭಾಗ್ ಮನಪಾ ಕಚೇರಿ ಮುಂಭಾಗದಲ್ಲಿ ಸ್ಥಾಪಿಸಿದ್ದ ಗಾಂಧಿ ಪುತ್ಥಳಿ. ನಗರದ ಮುಖ್ಯಭಾಗದಲ್ಲಿ ಗಾಂಧೀಜಿಯ ಪೂರ್ಣ ರೂಪದ ಮೂರ್ತಿ ಇದ್ದರೂ ಲಾಲಭಾಗಿನಲ್ಲಿ ಮತ್ತೊಂದು ಪುತ್ಥಳಿ ಸ್ಥಾಪಿಸುವ ತೆವಲು ಈ ಮೇಯರಿಗೆ. ಮೂರು ರಸ್ತೆಗಳು ಸೇರುವ ಜಾಗ, ಆರು ದಿಕ್ಕುಗಳಲ್ಲಿ ವಾಹನ ಚಲಿಸುವ ಅತಿ ಇಕ್ಕಟ್ಟಾದ ಜಂಕ್ಷನ್ನಿನಲ್ಲಿ ಚಿಕ್ಕದೊಂದು ಜಾಗ ಆರಿಸಿ, ಅರ್ಧ ಗಾಂಧಿಯ ಮೂರ್ತಿ ಸ್ಥಾಪಿಸಲಾಯಿತು. ಜನರ ಕಣ್ಣಿಗೆ ಸ್ಪಷ್ಟವಾಗಿ ಗೋಚರವಾಗದ, ಇಕ್ಕಟ್ಟಾದ ಒಂದು ಜಾಗದಲ್ಲಿ ಇದನ್ನು ಸ್ಥಾಪಿಸಿರುವುದು ಗಾಂಧೀಜಿಗೆ ಮಾಡಿದ ಅಪಮಾನವೆನ್ನುವುದೇ ಸರಿ ಈಗಿನ ಮೇಯರ್ ನೆಹರೂ ಮೈದಾನಕ್ಕೆ ದ್ವಾರ ರಚಿಸಲು ಹಲವು ಲಕ್ಷ ರೂಪಾಯಿಗಳ ತೆರಿಗೆ ಹಣವನ್ನು ಕರಗಿಸಲಿದ್ದಾರೆ. ಆ ಹಣದಲ್ಲಿ ಹತ್ತು ಕಡೆ ಶೌಚಾಲಯ ಕಟ್ಟುತ್ತಿದ್ದರೆ, ಅದೆಷ್ಟು ಮಂದಿಗೆ ಉಪಕಾರವಾಗುತ್ತಿತ್ತು. ಮಂಗಳೂರಿನಲ್ಲಂತೂ ದ್ವಾರಗಳಿಗೆ ಕೊರತೆ ಇಲ್ಲ. ಎಷ್ಟೋ ದ್ವಾರಗಳಿಂದ ರಸ್ತೆ ಕಬಳಿಕೆಯಾಗಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುತ್ತದೆ ದ್ವಾರ ನಿರ್ಮಾಣಗಳನ್ನು ತಡೆಗಟ್ಟಬೇಕಾದ ಮಹಾನಗರ ಪಾಲಿಕೆಯೇ ಅಗತ್ಯವಿಲ್ಲದ ಮತ್ತೊಂದು ದ್ವಾರವನ್ನು ನಿರ್ಮಿಸುವುದು ಎಷ್ಟು ಸರಿ ಮೇಯರುಗಳ ತೆವಲುಗಳನ್ನು ನೋಡಿ ಅನುಭವಿಸಬೇಕಾದ ದುರ್ಗತಿ ನಾಗರಿಕರದ್ದು ಎಂದಷ್ಟೇ ಹೇಳಬಹುದೋ ಏನೋ

  • ಮುಕೇಶ್ ಎಂ  ಮಂಗಳೂರು

LEAVE A REPLY