ನಗರದ ಪ್ರಮುಖ ವೃತ್ತಗಳಿಗೆ ಪುನರ್ ನಿರ್ಮಾಣ ಭಾಗ್ಯ

ಗುತ್ತಿನ ಮನೆ ಸ್ವರೂಪ

ಪಡೆಯಲಿದೆ ಮಲ್ಲಿಕಟ್ಟೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪಾಲಿಕೆ ವ್ಯಾಪ್ತಿಯೊಳಗಿನ ಕೆಲವು ವೃತ್ತಗಳು ಶೀಘ್ರವೇ ಹೊಸ ವಿನ್ಯಾಸದೊಂದಿಗೆ ಪುನರ್ ನಿರ್ಮಾಣಗೊಳ್ಳಲಿದೆ. ಈ ಮೂಲಕ ಮಂಗಳೂರಿನ ಸೌಂದರ್ಯಕ್ಕೆ ಇನ್ನಷ್ಟು ಮೆರುಗು ಸಿಗಲಿದೆ. ಮುಖ್ಯವಾಗಿ ನಗರದ ಮಲ್ಲಿಕಟ್ಟೆಯಲ್ಲಿರುವ ವೃತ್ತ ಕರಾವಳಿಯ ಗುತ್ತಿನ ಮನೆಯ ಸ್ವರೂಪದಂತೆ ಸಾಂಪ್ರದಾಯಿಕ ಶೈಲಿಯಲ್ಲಿ ಪುನಃರೂಪಿತವಾಗಲಿದೆ. ಭಂಡಾರಿ ಬಿಲ್ಡರ್ಸ್ ಇದಕ್ಕೆ ಪ್ರಾಯೋಜಕತ್ವ ನೀಡಿದ್ದು, ಕಾಮಗಾರಿ ಶೀಘ್ರವೇ ಆರಂಭವಾಗಲಿದೆ. ಸುಮಾರು 15 ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು, ಉದ್ಘಾಟನೆ ಬಳಿಕ ಇದು ಪಾಲಿಕೆಗೆ ಹಸ್ತಾಂತರವಾಗಲಿದೆ.

ವೃತ್ತದ ಸುತ್ತಲೂ ಹಚ್ಚಹಸುರಿನ ಗಾರ್ಡನ್, ಕಾರಂಜಿ, ಲ್ಯಾಂಡ್ ಸ್ಕೇಪ್ ವ್ಯವಸ್ಥೆ. ತುಳುನಾಡಿನ ಸಾಂಪ್ರದಾಯಿಕ ಶೈಲಿಯನ್ನು ನೆನಪಿಸುವ ಮಾದರಿಯ ಗುತ್ತಿನ ಮನೆಯ ಕಲ್ಲಿನ ವಿನ್ಯಾಸದಲ್ಲಿ ಪಕ್ಕಾಸು ಜೋಡಿಸುವ ರೀತಿಯ ಕಮಾನು, ಎಲ್ ಇ ಡಿ ಲೈಟ್ ವ್ಯವಸ್ಥೆ ಹಾಗೂ ರಾಜ್ಯದ ಸಂಸ್ಕೃತಿ ಬಿಂಬಿಸುವ ಸುಂದರ ಚಿತ್ರಗಳೂ ಇಲ್ಲಿ ಮೂಡಲಿವೆ.

ಶ್ರೀ ಕ್ಷೇತ್ರ ಕದ್ರಿ ಜಾತ್ರಾ ಮಹೋತ್ಸವ ಜನವರಿಯಲ್ಲಿ ನಡೆಯಲಿದ್ದು, ಅದಕ್ಕೂ ಮುನ್ನ ಈ ಸರ್ಕಲ್ ಹೊಸ ರೂಪ ಮೈದಾಳಲಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹಲವು ಸರ್ಕಲುಗಳನ್ನು ಪುನರ್‍ನಿರ್ಮಿಸಲು ಪಾಲಿಕೆ ಮುಂದಾಗಿದೆ. ಪಿವಿಎಸ್ ವೃತ್ತವನ್ನು ಆಕರ್ಷಕವಾಗಿ ಪುನಃರೂಪಿಸುವುದಾಗಿ ಪಿವಿಎಸ್ ಸಮೂಹ ಈಗಾಗಲೇ ಪಾಲಿಕೆಗೆ ಮನವಿ ಸಲ್ಲಿಸಿದೆ.

ಎ ಬಿ ಶೆಟ್ಟಿ ಸರ್ಕಲ್, ಲೇಡಿಹಿಲ್ ಸರ್ಕಲ್, ನಂದಿಗುಡ್ಡ ಸರ್ಕಲ್, ಬಂಟ್ಸ್ ಹಾಸ್ಟೆಲ್ ವೃತ್ತ, ಬಲ್ಲಾಳಬಾಗ್ ಸರ್ಕಲ್ ಸಹಿತ ಕೆಲವೇ ವೃತ್ತಗಳು ಮಾತ್ರ ಇಂದು ನಗರದ ಶೋಭೆ ಹೆಚ್ಚಿಸುತ್ತಿವೆ.  ಮಾರ್ನಮಿಕಟ್ಟೆ, ಸ್ಟೇಟ್ ಬ್ಯಾಂಕ್ ಸರ್ಕಲ್, ಅಂಬೇಡ್ಕರ್ ಸರ್ಕಲ್, ನಂತೂರು ಸರ್ಕಲ್, ಕ್ಲಾಕ್ ಟವರ್ ಸರ್ಕಲ್, ಕೆಪಿಟಿ ಸರ್ಕಲ್ ಸಹಿತ ಇನ್ನೂ ಹಲವು ಸರ್ಕಲುಗಳು ಸುಂದರವಾಗಿ ಪುನರ್ ರೂಪಗೊಳ್ಳಬೇಕಿದೆ.

ನಗರದಲ್ಲಿನ ಖಾಲಿ ಸ್ಥಳದಲ್ಲಿ ಲ್ಯಾಂಡ್ ಸ್ಕೇಪ್ ಮಾಡಲು ಹಾಗೂ ಪ್ರಮುಖ ವೃತ್ತಗಳನ್ನು ಸುಂದರಗೊಳಿಸಲು ಮುಂದೆ ಬರುವ ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡಲು ಪಾಲಿಕೆ ತೀರ್ಮಾನಿಸಿದೆ. ರಸ್ತೆಗೆ ಅಡೆ ತಡೆಯಾಗದಂತೆ ವೃತ್ತದ ಉದ್ದ, ಅಗಲ ಇತ್ಯಾದಿ ಲೆಕ್ಕಾಚಾರ ನಡೆಸಿ, ಮೂಲ ವಿನ್ಯಾಸವನ್ನು ಪಾಲಿಕೆ ತಯಾರಿಸಿ ಖಾಸಗಿಯವರಿಗೆ ಹಸ್ತಾಂತರಿಸಲಿದೆ.

ನಗರದ ಪ್ರಮುಖ 6 ವೃತ್ತಗಳ ಅಭಿವೃದ್ಧಿಗೆ ಪಾಲಿಕೆ ಈಗಾಗಲೇ ಚಾಲನೆ ನೀಡಿದೆ. ಸೈಂಟ್ ಆಗ್ನೇಸ್ ವೃತ್ತ, ಸಿಟಿ ಆಸ್ಪತ್ರೆ ವೃತ್ತ, ಕರಾವಳಿ ವೃತ್ತ, ಪದವಿನಂಗಡಿ ವೃತ್ತ, ಕದ್ರಿ ವೃತ್ತ, ಮಲ್ಲಿಕಟ್ಟೆ ವೃತ್ತಗಳ ಅಭಿವೃದ್ಧಿಗೆ 3.50 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.