ಪ್ರಬಲ ನಾಯಕನ ಸಮಸ್ಯೆ : ಮೋದಿಯಿಂದ ಟ್ರಂಪ್ ಹಂತದವರೆಗೆ

ಈ ಇಬ್ಬರು ಪ್ರಬಲ ನಾಯಕರು ತಮ್ಮ ಜನಪ್ರಿಯತೆ ಮತ್ತು ಪ್ರಾಬಲ್ಯವನ್ನು ಬಳಸಿಕೊಂಡು ಎರಡೂ ರಾಷ್ಟ್ರಗಳ ಪ್ರಜಾತಂತ್ರ ವ್ಯವಸ್ಥೆ ಮತ್ತು ವಿಶ್ವಾಸಾರ್ಹತೆಯನ್ನು ಬದಲಾಯಿಸಬಲ್ಲರೇ ಎಂಬ ಪ್ರಶ್ನೆ ಇಂದು ಚರ್ಚೆಗೊಳಗಾಗಿದೆ

 

  • ಸ್ಟೀವ್ ಕೊಲ್

ನವಂಬರ್ 8ರ ರಾತ್ರಿ ಎಂಟು ಗಂಟೆಯ ಸಂದರ್ಭದಲ್ಲಿ ಅಮೆರಿಕದ ಜನತೆ ಅಚ್ಚರಿ ಮೂಡಿಸುವ ಮತದಾನದ ಮೂಲಕ ಡೋನಾಲ್ಡ್ ಟ್ರಂಪ್ ಅವರನ್ನು ಅಮೆರಿಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಸುದ್ದಿ ಬಿತ್ತರವಾಗುತ್ತಿರುವಂತೆಯೆ ಇತ್ತ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಚಲಾವಣೆಯಲ್ಲಿದ್ದ ಎಲ್ಲ 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಆ ಕ್ಷಣದಿಂದಲೇ ಅಮಾನ್ಯಗೊಳಿಸಿರುವುದಾಗಿ ಘೋಷಿಸಿದ್ದರು.

ಭಾರತದ ಆರ್ಥಿಕತೆಯಲ್ಲಿ ಚಲಾವಣೆಯಲ್ಲಿದ್ದ ಶೇ 86ರಷ್ಟು ನಗದು ನಿಷೇಧಕ್ಕೊಳಗಾಗಿತ್ತು. ಭ್ರಷ್ಟಾಚಾರವನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೋದಿ ಘೋಷಿಸಿದ್ದರು. ನಗದು ವಹಿವಾಟು ಹೆಚ್ಚಾಗಿರುವುದರಿಂದ ಭಯೋತ್ಪಾದಕರಿಗೆ ಹಣದ ಹರಿವು ಹೆಚ್ಚಾಗುತ್ತದೆ ಮತ್ತು ಕಾನೂನು ಭಂಜಕರಿಗೆ, ತೆರಿಗೆ ವಂಚಕರಿಗೆ ನೆರವಾಗುತ್ತದೆ, ಹಾಗಾಗಿ ಅಕ್ರಮ ಸಂಪತ್ತಿಗೆ ಕಡಿವಾಣ ಹಾಕಲು ನೋಟು ಅಮಾನ್ಯೀಕರಣ ಮಾಡಿರುವುದಾಗಿ ಮೋದಿ ಘೋಷಿಸಿದ್ದರು.

ತಮ್ಮ ಅಮಾನ್ಯೀಕರಣ ನೀತಿಯಿಂದ ಉಂಟಾಗುವ ಪರಿಸ್ಥಿತಿಯ ಬಗ್ಗೆ ಸರ್ಕಾರಕ್ಕೆ ಯಾವುದೇ ಮುನ್ನೆಚ್ಚರಿಕೆ ಇರಲಿಲ್ಲ. ಹಠಾತ್ತನೆ ಬಂದೊರಗಿದ ಪರಿಸ್ಥಿತಿಯನ್ನು ನಿಭಾಯಿಸಲು ಭಾರತದ ಪ್ರಜೆಗಳು ತಮ್ಮ ಬಳಿ ಇದ್ದ ಹಣವನ್ನು ಹಿಂಪಡೆಯಲು ಬ್ಯಾಂಕುಗಳ ಮುಂದೆ ದಿನಗಟ್ಟಲೆ ಸಾಲುಗಟ್ಟಿ ನಿಲ್ಲಬೇಕಾಯಿತು. ನೋಟು ರದ್ದತಿಯ ಪರಿಣಾಮ ಭಾರತದ ಅರ್ಥವ್ಯವಸ್ಥೆಗೆ ಹಿನ್ನಡೆ ಉಂಟಾಗಿದ್ದು ಇಂದಿಗೂ ಸಹ ಬದಲಿ ನಗದು ವ್ಯವಸ್ಥೆ ಇಲ್ಲವಾಗಿದೆ. ರಿಯಲ್ ಎಸ್ಟೇಟ್, ಮೋಟಾರು ವಾಹನ ವಹಿವಾಟು ಮತ್ತು ಸಣ್ಣ ವ್ಯಾಪಾರಿಗಳ ಜಾಹೀರಾತು ಉದ್ಯಮಕ್ಕೆ ಬಹಳಷ್ಟು ಧಕ್ಕೆ ಉಂಟಾಗಿದೆ.

ಶುಕ್ರವಾರ ಅಮೆರಿಕದ ಅಧ್ಯಕ್ಷರಾಗಿ ಡೋನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡರೆ ಜಾಗತಿಕ ಮಟ್ಟದಲ್ಲಿ ಹೆಚ್ಚು ಹೆಚ್ಚು ಜನಪ್ರಿಯರಾಗುತ್ತಿರುವ ಪ್ರಬಲ ರಾಷ್ಟ್ರೀಯವಾದಿಗಳ ಪಟ್ಟಿಗೆ ಮೋದಿಯೊಡನೆ ಟ್ರಂಪ್ ಸಹ ಸೇರುತ್ತಾರೆ. ಬಡ ಮತ್ತು ಶ್ರೀಮಂತ ರಾಷ್ಟ್ರಗಳಲ್ಲಿ, ಪ್ರಜಾತಂತ್ರ ಮತ್ತು ಸರ್ವಾಧಿಕಾರದ ಮೂಲಕ ಈ ಪ್ರಬಲ ನಾಯಕರು ಜನತೆಯನ್ನು ಬೆದರಿಸುವ ಮೂಲಕ, ಸ್ಪಷ್ಟ ನಿಲುವು ವ್ಯಕ್ತಪಡಿಸದೆ ಅನಿಶ್ಚಿತತೆ ಉಂಟುಮಾಡುವ ಮೂಲಕ ಮತ್ತು ಹಠಾತ್ ನಿರ್ಧಾರಗಳ ಮೂಲಕ ಅಚ್ಚರಿ ಮೂಡಿಸುವ ಮೂಲಕ ಜನರ ಮೇಲೆ ನಿಯಂತ್ರಣ ಸಾಧಿಸುತ್ತಾರೆ.

2014ರಲ್ಲಿ ಅಧಿಕಾರಕ್ಕೆ ಬಂದ ಹಿಂದೂ ರಾಷ್ಟ್ರೀಯವಾದಿ ಬಿಜೆಪಿ ಪಕ್ಷದ ನಾಯಕ ನರೇಂದ್ರ ಮೋದಿ ತಮ್ಮ ವ್ಯಕ್ತಿತ್ವದ ಸುತ್ತಲೂ ಒಂದು ಪಂಥವನ್ನು ಸೃಷ್ಟಿಸಿಕೊಂಡಿದ್ದಾರೆ. ಇತ್ತೀಚೆಗೆ ಖಾದಿ ನೂಲುವ ಚರಕದೊಂದಿಗೆ ಮಹಾತ್ಮ ಗಾಂಧಿಯ ಬದಲು ತಮ್ಮನ್ನೇ ಬಿಂಬಿಸಿಕೊಳ್ಳುವ ಮೂಲಕ ವಿವಾದ ಸೃಷ್ಟಿಸಿರುವ ಮೋದಿ ಸರ್ವಾಧಿಕಾರಿ ಧೋರಣೆಯ ಪ್ರತೀಕವಾಗಿದ್ದು ಸಹಜವಾಗಿಯೇ ಟ್ರಂಪ್ ಅವರೊಡನೆ ಹೋಲಿಕೆಗೆ ವಸ್ತುವಾಗುತ್ತಾರೆ.

ಅಮೆರಿಕ ಮತ್ತು ಭಾರತದ ಪ್ರಜಾತಂತ್ರ ವ್ಯವಸ್ಥೆಯ ನಡುವೆ ಸದಾ ತುಲನಾತ್ಮಕ ವಿಶ್ಲೇಷಣೆ ನಡೆಯುತ್ತಲೇ ಇರುತ್ತದೆ. ಎರಡೂ ರಾಷ್ಟ್ರಗಳು ಧಾರ್ಮಿಕವಾಗಿ ಮತ್ತು ಜನಾಂಗೀಯ ನೆಲೆಯಲ್ಲಿ ಬಹುಸಂಸ್ಕøತಿಯನ್ನು ಹೊಂದಿದ್ದು ಪ್ರಜಾಸತ್ತಾತ್ಮಕ ಚುನಾವಣೆಗಳ ಮೂಲಕ ರಾಜಕೀಯ ಸ್ಥಿರತೆಯನ್ನು ಕಂಡುಕೊಂಡಿವೆ.

ಈಗ ಎರಡೂ ರಾಷ್ಟ್ರಗಳ ಅಧಿಕಾರ ಅಹಮಿಕೆಯನ್ನು ಮೈವೆತ್ತ ನಾಯಕರ ಪಾಲಾಗಿದ್ದು ಪ್ರತಿರೋಧದ ದನಿಗಳನ್ನು ಅಡಗಿಸುವ ಮೂಲಕ ತಮ್ಮ ದೇಶದ ಬಹುಸಂಸ್ಕøತಿ ಮತ್ತು ಮುಕ್ತ ಚಿಂತನೆಗೆ ವ್ಯತಿರಿಕ್ತವಾಗಿ ಆಡಳಿತ ನಡೆಸಲಿದ್ದಾರೆ. ಭಾರತದಂತೆಯೇ ಅಮೆರಿಕದಲ್ಲೂ ಟ್ರಂಪ್ ತನ್ನ ಕುಟುಂಬ ರಾಜಕಾರಣವನ್ನು ರೂಪಿಸಿದ್ದಾರೆ. ಅವರ ಅಳಿಯ ಮುಖ್ಯ ಸಲಹೆಗಾರರಾಗಿದ್ದು ಮಗಳು ವಿದೇಶಿ ನಾಯಕರೊಡನೆ ಸಮಾಲೋಚನೆ ನಡೆಸಲು ನಿಯೋಜಿಸಲ್ಪಟ್ಟಿದ್ದಾರೆ. ಟ್ರಂಪ್ ಕುಟುಂಬದ ವಾಣಿಜ್ಯ ಹಿತಾಸಕ್ತಿಗಳು ರಾಜಕೀಯ ಹಿತಾಸಕ್ತಿಗಳೊಡನೆ ಸಮ್ಮಿಳಿತಗೊಳ್ಳುವುದು ಖಚಿತವಾಗಿದೆ. ಇದು ಭಾರತವನ್ನೂ ಸೇರಿದಂತೆ ಏಷ್ಯಾ ಖಂಡದ ಎಲ್ಲ ದೇಶಗಳಲ್ಲೂ ಸಾಮಾನ್ಯ ಸಂಗತಿ.

ಭರವಸೆಗಳು ಎಷ್ಟೇ ಭಗ್ನವಾದರೂ ಭಾರತದ ಮಧ್ಯಮ ವರ್ಗದ ಜನ ಮೋದಿ ಸರ್ಕಾರದ ನೋಟು ರದ್ದತಿಯ ನೀತಿಯನ್ನು ಸ್ವಾಗತಿಸುತ್ತಾರೆ. ಮೂಲತಃ ಹೆಚ್ಚು ಹಣವನ್ನು ಹೊಂದಿರದ ಮಧ್ಯಮ ವರ್ಗಗಳು ತಮ್ಮ ಸುತ್ತಲಿನ ಶ್ರೀಮಂತರ ಅಕ್ರಮ ಸಂಪತ್ತನ್ನು ನಿಯಂತ್ರಿಸಲು ಸರ್ಕಾರದ ಈ ಕ್ರಮ ನೆರವಾಗಬಹುದು ಎಂಬ ನಿರೀಕ್ಷೆಯಲ್ಲಿ ಸಂಕಷ್ಟದ ದಿನಗಳನ್ನು ಸಹಿಸಿಕೊಂಡಿದ್ದಾರೆ. ಹಾಗಾಗಿ ನೋಟು ರದ್ದತಿಯಿಂದ ದೇಶಾದ್ಯಂತ ಕ್ಷೋಭೆ ಉಂಟಾದರೂ ಮೋದಿಯ ಜನಪ್ರಿಯತೆಗೆ ಧಕ್ಕೆ ಉಂಟಾಗಿಲ್ಲ.

ಡೋನಾಲ್ಡ್ ಟ್ರಂಪ್ ಅನುಸರಿಸುವ ಮಾರ್ಗವೂ ಇದೇ ರೀತಿ ಕಾಣುತ್ತಿದೆ. ತಮಗೆ ಹಿನ್ನಡೆ ಉಂಟಾದಾಗ ಸಾಮಾಜಿಕ ಮಾಧ್ಯಮಗಳ ಮೂಲಕ ಚರ್ಚೆಯ ದಿಕ್ಕನ್ನೇ ಬದಲಾಯಿಸುವ ತಂತ್ರಗಾರಿಕೆಯನ್ನು ಮೋದಿಯಂತೆಯೇ ಟ್ರಂಪ್ ಸಹ ಅನುಸರಿಸುತ್ತಿದ್ದಾರೆ. ಈ ಇಬ್ಬರು ಪ್ರಬಲ ನಾಯಕರು ತಮ್ಮ ಜನಪ್ರಿಯತೆ ಮತ್ತು ಪ್ರಾಬಲ್ಯವನ್ನು ಬಳಸಿಕೊಂಡು ಎರಡೂ ರಾಷ್ಟ್ರಗಳ ಪ್ರಜಾತಂತ್ರ ವ್ಯವಸ್ಥೆ ಮತ್ತು ವಿಶ್ವಾಸಾರ್ಹತೆಯನ್ನು ಬದಲಾಯಿಸಬಲ್ಲರೇ ಎಂಬ ಪ್ರಶ್ನೆ ಇಂದು ಚರ್ಚೆಗೊಳಗಾಗಿದೆ. ಪ್ರಬಲ ನಾಯಕರು ಸ್ಥಾಪಿತ ವ್ಯವಸ್ಥೆಯ ಸಾಂಸ್ಥಿಕ ಸ್ವರೂಪವನ್ನು ಬದಲಿಸುವ ಅಪಾಯವನ್ನು ಅಮೆರಿಕ ಎದುರಿಸುತ್ತಿರುವಂತೆಯೇ ಭಾರತವೂ ಎದುರಿಸುತ್ತಿರುವುದು ಸ್ಪಷ್ಟ. (ಕೃಪೆ : ನ್ಯೂಯಾರ್ಕರ್)