ಕಾಟಾಚಾರದ ಮಂಗಳೂರು ಒನ್ ಸೆಂಟರ್ ಆಧಾರ್ ನೋಂದಣಿ ಕೇಂದ್ರದಲ್ಲಿ ಅವ್ಯವಸ್ಥೆ

ಮಂಗಳೂರು : ಜನರ ಅನುಕೂಲಕ್ಕೆ ಸರಕಾರ ಮಂಗಳೂರು ಒನ್ ಸೆಂಟರ್ ಪ್ರಾರಂಭಿಸಿದೆ. ಆದರೆ ಆರಂಭದಲ್ಲಿ ಚೆನ್ನಾಗಿಯೇ ಇದ್ದ ಈ ಸೆಂಟರ್ ಇತ್ತೀಚೆಗಂತೂ ಕಾಟಾಚಾರಕ್ಕೆ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿದೆ.

ಇಂತಹ ಸೆಂಟರ್ ಮೂಲಕ ಜನರು ದೂರವಾಣಿ, ನೀರು, ವಿದ್ಯುತ್, ತೆರಿಗೆ ಪಾವತಿಸುತ್ತಾರೆ. ಇದೇ ಉದ್ದೇಶದಿಂದ ಕದ್ರಿ ಮಲ್ಲಿಕಟ್ಟೆಯಲ್ಲೂ ಮಂಗಳೂರು ಒನ್ ಸೆಂಟರ್ ಆರಂಭಿಸಲಾಗಿತ್ತು. ಆದರೆ ಇತ್ತೀಚೆಗೆ ಕೇವಲ ಹೆಸರಿಗಷ್ಟೇ ಇದು ಕಾರ್ಯನಿರ್ವಹಿಸುತ್ತಿದೆ. ಈ ವ್ಯವಸ್ಥೆಯನ್ನು ಚೆನ್ನಾಗಿ ಉಪಯೋಗಿಸುವುದಕ್ಕೆ, ಸದ್ಬಳಕೆ ಮಾಡುವುದಕ್ಕೆ ಸಂಬಂಧಿತರು ಆಸಕ್ತಿ ತೋರಿಸುತ್ತಿಲ್ಲ.

ಸಿಬ್ಬಂದಿಗಳಿಗೆ ಸಂಬಳ ಪಾವತಿಸದೇ ಒಂದೊಮ್ಮೆ ವಿವಾದಕ್ಕೆ ಕಾರಣವಾಗಿದ್ದ ಈ ಕೇಂದ್ರ ಇದೀಗ ಅವ್ಯವಸ್ಥೆಯ ಗೂಡು. ಲೈಟ್ ಉರಿಯುತ್ತಿಲ್ಲ, ಕುಳಿತುಕೊಳ್ಳಲು ಕುರ್ಚಿ ಇಲ್ಲ, ಬಿಲ್ ಕಟ್ಟಲು ಬಂದವರು ಸರತಿ ಕಂಡು ವಾಪಾಸ್ ಹೋಗುವ ಸ್ಥಿತಿ. ಆಧಾರ್ ಕಾರ್ಡ್ ನೋಂದಣಿ ಕೇಂದ್ರದಲ್ಲಂತೂ ಜನ ಪಡುವ ಕಷ್ಟ ಅಷ್ಟಿಷ್ಟಲ್ಲ. ಹಿರಿಯ ನಾಗರಿಕರ ಸಂಕಷ್ಟವನ್ನು ಕೇಳುವವರಿಲ್ಲ.

`ಇಷ್ಟೊಂದು ಸಮಸ್ಯೆಗಳಿದ್ದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ. ಹಲವು ಭಾಗ್ಯಗಳನ್ನು ಕಲ್ಪಿಸಿರುವ ರಾಜ್ಯ ಸರಕಾರ, ಮಂಗಳೂರು ಒನ್ ಸೆಂಟರಿನಲ್ಲಲಿ ಮಾತ್ರ ಜನರಿಗೆ ಉತ್ತಮ ವ್ಯವಸ್ಥೆಯ ಭಾಗ್ಯವನ್ನು ಕಲ್ಪಿಸುತ್ತಿಲ್ಲ. ಮಂಗಳೂರು ಒನ್ ಕಟ್ಟಡದ, ಕಣ್ಣಳತೆಯ ದೂರದಲ್ಲೇ ಶಾಸಕ ಲೋಬೋ ಅವರ ಕಚೇರಿ ಇದೆ. ಅವರ ಗಮನಕ್ಕೂ ಈ ಸಮಸ್ಯೆ ಬಂದಿರಬಹುದು. ಹೀಗಿದ್ದೂ ಜನ ಸಂಕಷ್ಟವನ್ನು ಅನುಭವಿಸುತ್ತಿರುವುದು ದೌರ್ಭಾಗ್ಯದ ಸಂಗತಿ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರಾದ ಜೆರಾಲ್ಡ್ ಟವರ್ ಅವರು.