ಗೌರಿ ನಿವಾಸ, ಕಚೇರಿಯಲ್ಲಿ ತನಿಖಾಧಿಕಾರಿಗಳ ವಿಚಾರಣೆ

ನಮ್ಮ ಪ್ರತಿನಿಧಿ ವರದಿ

ಬೆಂಗಳೂರು : ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಆರೋಪಿಗಳ ಪತ್ತೆಗಾಗಿ ತನಿಖೆಯನ್ನು ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ ಭಾನುವಾರದಂದು ಗೌರಿ ನಿವಾಸಕ್ಕೆ ಮತ್ತು ಕಚೇರಿಗೆ ತೆರಳಿ ವಿಚಾರಣೆ ನಡೆಸಿದೆ.

ಬಸವನಗುಡಿ ಆಂಜನೇಯ ದೇವಸ್ಥಾನ ರಸ್ತೆ ಬಳಿ ಇರುವ ಗೌರಿ ಲಂಕೇಶ್ ಅವರ ಕಚೇರಿಗೆ ಭೇಟಿ ನೀಡಿದ ಅಧಿಕಾರಿಗಳು, ಸಿಬ್ಬಂದಿಗಳನ್ನು ವಿಚಾರಣೆಗೊಳಪಡಿಸಿದರು.

ಗೌರಿ ಹತ್ಯೆ ನಡೆಯವ ಪೂರ್ವದಲ್ಲಿ ಕಚೇರಿಗೆ ಯಾರೆಲ್ಲಾ ಭೇಟಿ ನೀಡಿದ್ದರು ಎನ್ನುವ ಮಾಹಿತಿಯನ್ನು ಅಲ್ಲಿನ ದಾಖಲೆ ಕಂಡು ಪಡೆದುಕೊಂಡರು. ಅಲ್ಲದೆ ಕಚೇರಿ ಸಿಬ್ಬಂದಿಗಳ ಮೊಬೈಲ್ ನಂಬರುಗಳನ್ನು ಕೂಡಾ ಪಡೆದುಕೊಂಡರು. ಸಂಜೆಯವರೆಗೂ ವಿಚಾರಣೆ, ದಾಖಲೆ ಪತ್ರಗಳನ್ನು ಪರಿಶೀಲಿಸಿದ ತನಿಖಾಧಿಕಾರಿಗಳು ಗೌರಿ ಅವರ ಕಂಪ್ಯೂಟರಿನಲ್ಲಿದ್ದ ಮಾಹಿತಿಗಳನ್ನೂ ಕಲೆ ಹಾಕಿದ್ದಾರೆ